ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ, ಒಟ್ಟು 20,585.73 ಕೋಟಿ ರೂಪಾಯಿಗಳ ಬರ ಪರಿಹಾರ ಧನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿರುವ ಅವರು, ರಾಜ್ಯದ ರೈತರ ಹಿತದೃಷ್ಟಿಯಿಂದ ಶೀಘ್ರ ಆರ್ಥಿಕ ನೆರವು ನೀಡುವಂತೆ ತುರ್ತು ಹಸ್ತಕ್ಷೇಪಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ತೀವ್ರ ಮಳೆ ಕೊರತೆ
2026ರ ನೈಋತ್ಯ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ ಶೇ. 35ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆಯಂತೆ 852 ಮಿ.ಮೀ ಮಳೆಯಾಗಬೇಕಿದ್ದ ಜಾಗದಲ್ಲಿ ಕೇವಲ 551 ಮಿ.ಮೀ ಮಳೆಯಾಗಿದ್ದು, ಇದು 1956ರ ನಂತರ ದಾಖಲಾದ ಎರಡನೇ ಅತ್ಯಂತ ಕಡಿಮೆ ಮಳೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರವು 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದರಿಂದ 62,481.88 ಕೋಟಿ ರೂಪಾಯಿಗಳ ಕೃಷಿ ನಷ್ಟ ಸಂಭವಿಸಿದೆ.
ಕೇಂದ್ರದ ಬಳಿ ರಾಜ್ಯ ಸರ್ಕಾರ ಕೇಳಿರುವ ಪರಿಹಾರ
ಕರ್ನಾಟಕ ಸರ್ಕಾರವು NDRF ನಿಧಿಯಡಿ ಒಟ್ಟು 20,585.73 ಕೋಟಿ ರೂ. ನೆರವಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಬೆಳೆ ಹಾನಿ ಸಹಾಯಧನಕ್ಕೆ 6,128.70 ಕೋಟಿ ರೂ.,ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯ ಪರಿಹಾರಕ್ಕಾಗಿ 61.91 ಲಕ್ಷ ರೈತ ಕುಟುಂಬಗಳ ನೆರವಿಗಾಗಿ 12,146.99 ಕೋಟಿ ರೂ., ಕುಡಿಯುವ ನೀರು ಪೂರೈಕೆ 1,727 ಕೋಟಿ ರೂ. ಹಾಗೂ 476 ಗೋಶಾಲೆ ಹಾಗೂ 583 ಮೇವು ಬ್ಯಾಂಕ್‌ಗಳ ಸ್ಥಾಪನೆ ಸೇರಿದಂತೆ 583.04 ಕೋಟಿ ರೂ. ಒಳಗೊಂಡಿದೆ.
‘ಫ್ರೂಟ್ಸ್’ ದತ್ತಾಂಶ ಪರಿಗಣಿಸಲು ಆಗ್ರಹ
ಕೇಂದ್ರ ಸರ್ಕಾರವು ಬರ ಪರಿಹಾರ ಲೆಕ್ಕ ಹಾಕಲು ಇನ್ನೂ 2015-16ರ ಹಳೆಯ ಕೃಷಿ ಗಣತಿ ದತ್ತಾಂಶವನ್ನು ಬಳಸುತ್ತಿರುವುದರಿಂದ ರಾಜ್ಯಕ್ಕೆ ಸುಮಾರು 1,669.50 ಕೋಟಿ ರೂ. ನಷ್ಟವಾಗುವ ಭೀತಿ ಇದೆ ಎಂದು ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಅರ್ಹ ರೈತರನ್ನು ನಿಖರವಾಗಿ ಗುರುತಿಸಲು ಕರ್ನಾಟಕ ಸರ್ಕಾರದ ನವೀಕೃತ ‘ಫ್ರೂಟ್ಸ್’ (FRUITS) ದತ್ತಾಂಶವನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:
ಇದರ ಜೊತೆಗೆ, ಬರಪೀಡಿತ ಪ್ರದೇಶಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯಲ್ಲೂ ಪೌಷ್ಟಿಕ ಆಹಾರ ನೀಡಲು ‘ಪಿಎಂ ಪೋಷಣ್’ ಅಡಿ 427.20 ಕೋಟಿ ರೂ. ಹಾಗೂ ದುರ್ಬಲ ವರ್ಗದವರಿಗೆ ಪೂರಕ ಪೌಷ್ಟಿಕಾಂಶ ಒದಗಿಸಲು 70.96 ಕೋಟಿ ರೂ. ಹೆಚ್ಚುವರಿ ನೆರವನ್ನು ಕೋರಲಾಗಿದೆ. ಈಗಾಗಲೇ ಅಕ್ಟೋಬರ್ ತಿಂಗಳ ಆರಂಭದಲ್ಲಿ ಕೇಂದ್ರದ ಅಧ್ಯಯನ ತಂಡ (IMCT) ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದರಿಂದ, ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ‘ಸಹಕಾರ ಒಕ್ಕೂಟ’ ತತ್ವದಡಿ ಕೇಂದ್ರ ಸರ್ಕಾರ ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.



