ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಂಪು ಸಮುದ್ರದಲ್ಲಿ ಭಾರತೀಯರನ್ನು ಹೊತ್ತೊಯ್ಯುತ್ತಿದ್ದ ವಿಹಾರನೌಕೆಯೊಂದನ್ನು ಸೌದಿ ಪಡೆಗಳು ಗುರಿಯಾಗಿಸಿಕೊಂಡು ದಾಳಿ ಮಾಡಿವೆ ಎಂದು ಅನ್ಸಾರಲ್ಲಾ (ಹೌತಿ) ಗುಂಪಿನ ಮಿಲಿಟರಿ ವಕ್ತಾರ ಯಾಹ್ಯಾ ಸರೀ ಆರೋಪಿಸಿದ್ದಾರೆ.
ಕೆಂಪು ಸಮುದ್ರದಲ್ಲಿ ಬಾಬ್ ಅಲ್-ಮಂಡೆಬ್ ಜಲಸಂಧಿಯ ಸಮೀಪ, ಜುಖಾರ್ ದ್ವೀಪದ ಬಳಿ ಈ ದಾಳಿಯಾಗಿದೆ ಎಂದು ಹೇಳಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ತಮ್ಮ ಪಡೆಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಸೌದಿಯ ಈ ಬೇಜವಾಬ್ದಾರಿ ಕೃತ್ಯವು ಕೆಂಪು ಸಮುದ್ರದಲ್ಲಿ ಅಂತಾರಾಷ್ಟ್ರೀಯ ನೌಕಾಯಾನಕ್ಕೆ ಅಪಾಯವನ್ನುಂಟು ಮಾಡುತ್ತದೆ. ಅಂತಾರಾಷ್ಟ್ರೀಯ ಸಮುದಾಯವು ಸೌದಿಯ ಇಂತಹ ಬೇಜವಾಬ್ದಾರಿ ಕ್ರಮಗಳನ್ನು ತಡೆಯಬೇಕು ಎಂದು ಹೌತಿ ವಕ್ತಾರರು ಆಗ್ರಹಿಸಿದ್ದಾರೆ.
ಈ ದಾಳಿ ಕುರಿತು ಯೆಮೆನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಕೂಡ ಪ್ರತಿಕ್ರಿಯೆ ನೀಡಿದೆ. ಯೆಮೆನ್ ಕರಾವಳಿಯ ಸಮೀಪ 14 ಭಾರತೀಯರಿದ್ದ ನೌಕೆ ಮೇಲಿನ ದಾಳಿಗೆ ಸಂಬಂಧಿಸಿದ ಘಟನೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿರುವುದಾಗಿ ಭಾರತ ಗುರುವಾರ ತಿಳಿಸಿದೆ. ಅಲ್ಲದೆ, ಅವರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದೆ.



