October 23, 2026
Friday, October 23, 2026
spot_img

30 ವರುಷಗಳ ವೃತ್ತಿಜೀವನದಲ್ಲಿ ಕಳೆದುಕೊಂಡಿದ್ದೇ ಹೆಚ್ಚು: ಕುಟುಂಬ ನೆನೆದು ಕಣ್ಣೀರಿಟ್ಟ ಆಮಿರ್‌ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಂಗಾಪುರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಾಲಿವುಡ್‌ನ ಖ್ಯಾತ ನಟ ಆಮಿರ್‌ ಖಾನ್‌ ಅವರು ತಮ್ಮ ವೃತ್ತಿಜೀವನದ ಕಷ್ಟದ ದಿನಗಳನ್ನು ನೆನೆದು ವೇದಿಕೆಯಲ್ಲಿಯೇ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ಪ್ರತಿಷ್ಠಿತ ಉತ್ಸವದಲ್ಲಿ ಅವರಿಗೆ ‘ಸ್ಕ್ರೀನ್ ಐಕಾನ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ವೈಯಕ್ತಿಕ ಬದುಕು ಮತ್ತು ಸಿನಿಮಾಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಸಂವಾದದ ವೇಳೆ ತಮ್ಮ ಜೀವನದ ಅತ್ಯಂತ ದುರ್ಬಲ ಕ್ಷಣದ ಬಗ್ಗೆ ಮಾತನಾಡಿದ ಆಮಿರ್, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ತಮಗೆ ಬಂದ ಆಲೋಚನೆಗಳನ್ನು ಹಂಚಿಕೊಂಡರು. ಕಳೆದ ಮೂರು ದಶಕಗಳಿಂದ ಬಿಡುವಿಲ್ಲದೆ ಕೆಲಸ ಮಾಡಿದ್ದನ್ನು ಸ್ಮರಿಸಿದ ಅವರು, “ಒಂದು, ಎರಡು ಅಥವಾ ಐದು ವರ್ಷಗಳ ಕಾಲ ಹುಚ್ಚನಂತೆ ಕೆಲಸ ಮಾಡುವುದು ಸರಿ. ಆದರೆ ಇದು 30 ವರ್ಷಗಳವರೆಗೆ ಮುಂದುವರಿದರೆ, ನಾವು ನಮ್ಮ ಸಂಬಂಧಗಳನ್ನು ಕಳೆದುಕೊಳ್ಳುತ್ತೇವೆ. ಮಕ್ಕಳು ಬೆಳೆದು ದೊಡ್ಡವರಾಗಿರುವುದೇ ನನಗೆ ಗೊತ್ತಾಗಲಿಲ್ಲ. ಇದನ್ನು ನೆನೆದಾಗ ನನಗೆ ಜೀವನದಲ್ಲಿ ಏನನ್ನೋ ಕಳೆದುಕೊಂಡ ಭಾವ ಕಾಡಿತು” ಎಂದು ಹೇಳುತ್ತಾ ಭಾವುಕರಾದರು.

ವೇದಿಕೆಯಲ್ಲಿಯೇ ಕಣ್ಣೀರಿಟ್ಟ ಆಮಿರ್‌ ಖಾನ್, ಪ್ರೇಕ್ಷಕರ ಬಳಿ ಕ್ಷಮೆ ಯಾಚಿಸಿ ತಮ್ಮ ಮಾತನ್ನು ಮುಂದುವರಿಸಿದರು. ಈ ಕಹಿ ಅನುಭವವೇ ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಯಿತು ಎಂದರು. ಕಳೆದ ನಾಲ್ಕು ವರ್ಷಗಳಿಂದ ತಾವು ವೃತ್ತಿಜೀವನದಿಂದ ಬಿಡುವು ಮಾಡಿಕೊಂಡು ಕುಟುಂಬ ಹಾಗೂ ಆಪ್ತ ಸ್ನೇಹಿತರಿಗಾಗಿ ಸಮಯ ಮೀಸಲಿಡುತ್ತಿರುವುದಾಗಿ ತಿಳಿಸಿದರು. “ಈ ಆಲೋಚನೆ ನನಗೆ 86ನೇ ವಯಸ್ಸಿನಲ್ಲಿ ಬಾರದೆ, 56ನೇ ವಯಸ್ಸಿನಲ್ಲಿ ಬಂದಿದ್ದಕ್ಕೆ ನನಗೆ ಖುಷಿಯಿದೆ. ತಡವಾಗುವ ಮುನ್ನವೇ ನನ್ನ ತಪ್ಪಿನ ಅರಿವಾಯಿತು” ಎಂದು ಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳ ಕರಾಳ ನೆನಪುಗಳನ್ನು ಅವರು ಬಿಚ್ಚಿಟ್ಟರು. 1988ರ ಅವರ ಚೊಚ್ಚಲ ಚಿತ್ರ ‘ಖಯಾಮತ್ ಸೆ ಖಯಾಮತ್ ತಕ್’ ಅಪಾರ ಯಶಸ್ಸು ಕಂಡ ನಂತರ, ಆಮಿರ್ ಕೇವಲ ಆರು ತಿಂಗಳಲ್ಲಿ ಒಟ್ಟು ಒಂಬತ್ತು ಸಿನಿಮಾಗಳಿಗೆ ಸಹಿ ಮಾಡಿದ್ದರು. ಆದರೆ ಚಿತ್ರೀಕರಣ ಶುರುವಾದ ಮೇಲೆ ತಾವು ಮಾಡಿದ ತಪ್ಪು ಅರಿವಿಗೆ ಬಂದಿತು. ಚಿತ್ರಗಳೆಲ್ಲವೂ ಒಂದರ ನಂತರ ಒಂದರಂತೆ ಸೋತುಹೋದವು. ಆ ಸಮಯದಲ್ಲಿ ಮಾಧ್ಯಮಗಳು ಮತ್ತು ಜನ ಅವರನ್ನು ‘ಒನ್-ಫಿಲ್ಮ್ ವಂಡರ್’ ಎಂದು ಹಣೆಪಟ್ಟಿ ಕಟ್ಟಿದರು. ಆ ದಿನಗಳಲ್ಲಿ ಮನೆಗೆ ಬಂದು ಅಳುತ್ತಿದ್ದದ್ದನ್ನು ಆಮಿರ್‌ ನೆನಪಿಸಿಕೊಂಡರು.

ಅಂತಿಮವಾಗಿ, ಕಷ್ಟದ ಹಾದಿಯನ್ನು ದಾಟಿ ಬಂದು ಈಗ ಕುಟುಂಬಕ್ಕೆ ಮೊದಲ ಆದ್ಯತೆ ನೀಡುತ್ತಿರುವ ಆಮಿರ್ ಖಾನ್ ಅವರ ಈ ಮುಕ್ತ ಮಾತುಗಳು ನೆರೆದಿದ್ದವರ ಮನಕಲಕುವಂತಿತ್ತು.

Must Read