ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಪ್ರಿಯರ ಗಮನ ಸೆಳೆಯುತ್ತಿರುವ ಹೊಸ ಟ್ರೆಂಡ್ ಎಂದರೆ ‘ರಕಿಂಗ್’. ಮೊದಲಿಗೆ ಸೇನೆಯ ಯೋಧರ ತರಬೇತಿಯ ಭಾಗವಾಗಿದ್ದ ಈ ಸರಳ ವ್ಯಾಯಾಮ, ಇಂದಿನ ಯುವಜನತೆ ಮತ್ತು ಆರೋಗ್ಯ ಪ್ರೇಮಿಗಳ ನೆಚ್ಚಿನ ವ್ಯಾಯಾಮವಾಗಿ ಹೊರಹೊಮ್ಮಿದೆ.
ಏನಿದು ರಕಿಂಗ್?
ಸರಳವಾಗಿ ಹೇಳಬೇಕೆಂದರೆ, ಬೆನ್ನಿನ ಮೇಲೊಂದು ಹೆವಿ ಬ್ಯಾಕ್ಪ್ಯಾಕ್ ಹಾಕಿಕೊಂಡು ದೀರ್ಘವಾಗಿ ನಡೆಯುವುದೇ ‘ರಕಿಂಗ್’. ಮಿಲಿಟರಿಯಲ್ಲಿ ಯೋಧರು ಆಯುಧಗಳು ಮತ್ತು ತಮಗೆ ಬೇಕಾದ ಸಾಮಗ್ರಿಗಳನ್ನು ಬೆನ್ನಿನಲ್ಲಿ ಹೊತ್ತು ಮೈಲುಗಟ್ಟಲೆ ನಡೆಯುತ್ತಾರೆ. ಇದನ್ನೇ ಈಗ ಸಾಮಾನ್ಯ ಜನರು ತಮ್ಮ ದೈನಂದಿನ ಫಿಟ್ನೆಸ್ ಅಭ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ.
ರಕಿಂಗ್ ಮಾಡುವುದು ಹೇಗೆ?
ರಕಿಂಗ್ ಮಾಡಲು ಯಾವುದೇ ದುಬಾರಿ ಉಪಕರಣಗಳ ಅಗತ್ಯವಿಲ್ಲ. ಒಂದು ಗಟ್ಟಿಮುಟ್ಟಾದ ಬ್ಯಾಕ್ಪ್ಯಾಕ್ ತೆಗೆದುಕೊಳ್ಳಿ. ಅದರಲ್ಲಿ ಕೆಲವು ಪುಸ್ತಕಗಳು, ನೀರಿನ ಬಾಟಲಿಗಳು ಅಥವಾ ಸಣ್ಣ ತೂಕದ ಕಲ್ಲುಗಳನ್ನು ಇಡಿ ಆರಂಭದಲ್ಲಿ 3 ರಿಂದ 5 ಕೆಜಿ ತೂಕ ಸಾಕು. ವಾರಕ್ಕೆ 2-3 ಬಾರಿ, 20 ರಿಂದ 30 ನಿಮಿಷಗಳ ಕಾಲ ನಿಧಾನವಾಗಿ ನಡೆಯಿರಿ. ಅಭ್ಯಾಸವಾದಂತೆ ತೂಕ ಮತ್ತು ಸಮಯವನ್ನು ಹೆಚ್ಚಿಸಿಕೊಳ್ಳಬಹುದು.
ರಕಿಂಗ್ ಪ್ರಾರಂಭಿಸುವ ಮುನ್ನ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಡಿಮೆ ತೂಕದಿಂದ ಶುರು ಮಾಡಿ. ಜಿಮ್ನ ಚೌಕಟ್ಟಿನಿಂದ ಹೊರಬಂದು, ನಿಸರ್ಗದ ನಡುವೆ ಪ್ರಕೃತಿಯ ಗಾಳಿ ಸವಿಯುತ್ತಾ ಫಿಟ್ ಆಗಿರಲು ‘ರಕಿಂಗ್’ ಅತ್ಯಂತ ಸರಳ ದಾರಿ.
ರಕಿಂಗ್ನಿಂದ ಸಿಗುವ ಲಾಭಗಳು
ಸಾಮಾನ್ಯ ನಡಿಗೆಗೆ ಹೋಲಿಸಿದರೆ ಬೆನ್ನಿನ ಮೇಲೆ ತೂಕ ಹೊತ್ತು ನಡೆಯುವುದರಿಂದ ದೇಹದಲ್ಲಿ ಶೇ. 30 ರಿಂದ 40% ಹೆಚ್ಚು ಕ್ಯಾಲೊರಿಗಳು ದಹನವಾಗುತ್ತವೆ.
ಇದು ಹೃದಯದ ಆರೋಗ್ಯವನ್ನು ಸುಧಾರಿಸುವುದಲ್ಲದೆ, ತೊಡೆ, ಬೆನ್ನು, ಹೆಗಲು ಮತ್ತು ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸುತ್ತದೆ.
ಓಡುವುದಕ್ಕೆ ಹೋಲಿಸಿದರೆ ರಕಿಂಗ್ನಲ್ಲಿ ಮೊಣಕಾಲು ಮತ್ತು ಕೀಲುಗಳ ಮೇಲೆ ಬೀಳುವ ಒತ್ತಡ ತೀರ ಕಡಿಮೆ. ಹೀಗಾಗಿ ಎಲ್ಲಾ ವಯಸ್ಸಿನವರೂ ಇದನ್ನು ಸುಲಭವಾಗಿ ಮಾಡಬಹುದು.
ಸರಳವಾದ ಈ ರಕಿಂಗ್ ಅಭ್ಯಾಸವನ್ನು ನಿಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು, ದಿನವೂ ಒಂದಷ್ಟು ಹೆಜ್ಜೆ ಹಾಕಿ ಪರಿಪೂರ್ಣ ಫಿಟ್ನೆಸ್ ನಿಮ್ಮದಾಗಿಸಿಕೊಳ್ಳಿ.



