ಹೊಸದಿಗಂತ ವರದಿ ಕಲಬುರಗಿ:
ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಶುಕ್ರವಾರ ನಡೆಯುತ್ತಿರುವ ಚುನಾವಣೆಯಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ಒಟ್ಟು ಶೇ.13.51ರಷ್ಟು ಮತದಾನವಾಗಿದೆ.
ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ಒಟ್ಟು 34,784 ಮತದಾರರಿದ್ದು, ಈ ಪೈಕಿ 4,700 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 20,040 ಪುರುಷ ಮತದಾರರಲ್ಲಿ 2,960 ಮಂದಿ ಹಾಗೂ 14,744 ಮಹಿಳಾ ಮತದಾರರಲ್ಲಿ 1,740 ಮಂದಿ ಮತ ಚಲಾಯಿಸಿದ್ದಾರೆ.
ಜಿಲ್ಲಾವಾರು ಮತದಾನದ ವಿವರದ ಪ್ರಕಾರ,ಕಲಬುರಗಿ ಜಿಲ್ಲೆಯಲ್ಲಿ ಅತಿ ಹೆಚ್ಚು 1,588 ಮತಗಳು ಚಲಾವಣೆಯಾಗಿದ್ದು, ಶೇ.14.93ರಷ್ಟು ಮತದಾನವಾಗಿದೆ. ಬೀದರ್ ಜಿಲ್ಲೆಯಲ್ಲಿ 872 ಮತಗಳು (ಶೇ.12.39), ರಾಯಚೂರು ಜಿಲ್ಲೆಯಲ್ಲಿ 727 ಮತಗಳು (ಶೇ.13.44), ವಿಜಯನಗರ ಜಿಲ್ಲೆಯಲ್ಲಿ 472 ಮತಗಳು (ಶೇ.14.19), ಬಳ್ಳಾರಿ ಜಿಲ್ಲೆಯಲ್ಲಿ 409 ಮತಗಳು (ಶೇ.12.05), ಕೊಪ್ಪಳ ಜಿಲ್ಲೆಯಲ್ಲಿ 337 ಮತಗಳು (ಶೇ.12.42) ಹಾಗೂ ಯಾದಗಿರಿ ಜಿಲ್ಲೆಯಲ್ಲಿ 295 ಮತಗಳು (ಶೇ.13.06) ಚಲಾವಣೆಯಾಗಿವೆ.
ಚುನಾವಣೆಗೆ ಒಟ್ಟು 144 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ 144 ಮತಗಟ್ಟೆಗಳಲ್ಲೂ ಬೆಳಿಗ್ಗೆ 8 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಹಿಂದಿನ ದಿನವೇ ಎಲ್ಲ ಮತಗಟ್ಟೆಗಳಿಗೆ ಮತಗಟ್ಟೆ ಸಿಬ್ಬಂದಿ ತಲುಪಿದ್ದು, ಚುನಾವಣಾ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಶಿಕ್ಷಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.



