ಹೊಸದಿಗಂತ ವರದಿ ಹುಬ್ಬಳ್ಳಿ:
ಶಿಕ್ಷಕರ ಕ್ಷೇತ್ರ ಪ್ರತಿನಿಧಿಸುವ ಅಭ್ಯರ್ಥಿಗಳು ಸಹ ಹಣಕೊಟ್ಟು ಮತ ಹಾಕಿಸಿಕೊಂಡು ಆಯ್ಕೆಯಾಗುವುದು ನೋವಿನ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ಫಾತಿಮಾ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಶುಕ್ರವಾರ ಮತದಾನ ಮಾಡಿ ಮಾಧ್ಯಮದ ಜೊತೆ ಅವರು ಮಾತನಾಡಿದರು.
ಈ ಹಿಂದೆ ವಿಧಾನ ಪರಿಷತ್ಗೆ ಮುತ್ಸದ್ಧಿಗಳು ಬರುತ್ತಿದ್ದರು. ಈಚೆಗೆ ಹಣ ನೀಡಿ ಮತಪಡೆಯುತ್ತಿರುವುದರಿಂದ ಅದು ವಿಧಾನಸಭೆಯ ಹಾಗೆಯೇ ಆಗಿದೆ ಎಂದರು.
ಶಿಕ್ಷಕರು ಇದರಿಂದ ದೂರ ಇದ್ದು, ಯೋಗ್ಯ ಅಭ್ಯರ್ಥಿಯನ್ನು ಆಯ್ಕೆಮಾಡಬೇಕು ಎಂದರು.
ಪ್ರತಿ ಬಾರಿ ಪದವೀಧರ ಕ್ಷೇತ್ರದ ಚುನಾವಣೆ ನಡೆಯುವ ಸಂದರ್ಭ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಸರಿಯಲ್ಲ. ಒಂದು ಬಾರಿ ಪದವಿ ಪಡೆದವರು ಕೊನೆಯವರೆಗೂ ಪದವೀಧರರಾಗಿಯೇ ಇರುತ್ತಾರೆ. ಚುನಾವಣೆ ಸಂದರ್ಭ ಹೊಸದಾಗಿ ಸೇರ್ಪಡೆ ಹೆಸರು ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆಯಷ್ಟೇ ಇರಬೇಕು ಎಂದು ಹೇಳಿದರು.
‘ಸಿದ್ದರಾಮಯ್ಯ ಅವರ ಹೆಸರು ಕೆಡಿಸಲು ಕೆಲವರು ವಿಡಿಯೊ ಮಾಡಿ, ಪೆನ್ಡ್ರೈವ್ ಮುಂದಿಟ್ಟುಕೊಂಡು ಹೆದರಿಸಿರಬಹುದು. ಅಥವಾ ಅದು ಎಐ ವಿಡಿಯೊ ಸಹ ಆಗಿರಬಹುದು. ಅವರೊಬ್ಬ ಶ್ರೇಷ್ಠ ರಾಜಕಾರಣಿಯಾಗಿದ್ದು, ಇಂತಹ ಕೃತ್ಯ ರಾಜಕಾರಣಕ್ಕೆ ನಾಚಿಕೆ ತರುವಂತಹದ್ದಾಗಿದೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಿ, ಎಷ್ಟೇ ದೊಡ್ಡವರಾಗಿದ್ದರೂ ಜೈಲಿಗೆ ಹಾಕಬೇಕು’ ಎಂದು ಹೊರಟ್ಟಿ ಒತ್ತಾಯಿಸಿದರು.
‘ಕೆಂಗಲ್ ಹನುಮಂತರಾಯ ಸಿಎಂ ಆಗಿದ್ದಾಗ ಬೆಂಗಳೂರು ವಿಧಾನಸೌಧ ಕಟ್ಟಿದ್ದರು, ರಾಮಕೃಷ್ಣ ಹೆಗಡೆ ಅವರು ಸಿಎಂ ಆಗಿದ್ದಾಗ ಆಡಳಿತ ವಿಕೇಂದ್ರೀಕರಣ ಮಾಡಿದರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದ್ದರು. ಈಗಿನ ಸರ್ಕಾರ ಸ್ಟಿಂಗ್ ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದರು.



