ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಐಸ್ ನೀರಿನಲ್ಲಿ ಮುಖ ಮುಳುಗಿಸುವುದು ಒಂದು ಹೊಸ ಟ್ರೆಂಡ್ ಆಗಿದೆ. ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ, ಸಾಮಾನ್ಯ ಜನರೂ ಸಹ ಬೆಳಿಗ್ಗೆ ಎದ್ದ ತಕ್ಷಣ ತಣ್ಣನೆಯ ಐಸ್ ನೀರಿನಲ್ಲಿ ಮುಖ ಮುಳುಗಿಸಿ ವೀಡಿಯೊ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ರೀತಿ ಮಾಡುವುದರಿಂದ ಚರ್ಮಕ್ಕೆ ನಿಜವಾಗಿಯೂ ಪ್ರಯೋಜನಗಳಿವೆಯೇ? ಅಥವಾ ಇದು ಕೇವಲ ಒಂದು ಸಾಮಾಜಿಕ ಮಾಧ್ಯಮದ ಫ್ಯಾಷನ್ ಅಷ್ಟೇನಾ?
ನೀವು ಬೆಳಿಗ್ಗೆ ಎದ್ದಾಗ ಮುಖ ಮತ್ತು ಕಣ್ಣುಗಳ ಸುತ್ತ ಊತ ಕಂಡುಬಂದರೆ, ಐಸ್ ನೀರು ಅದಕ್ಕೆ ತಕ್ಷಣದ ಪರಿಹಾರ ನೀಡುತ್ತದೆ. ತಣ್ಣನೆಯ ನೀರು ರಕ್ತನಾಳಗಳನ್ನು ಕಿರಿದಾಗಿಸಿ, ಮುಖದ ಮೇಲಿನ ಊತವನ್ನು ಬೇಗನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಐಸ್ ನೀರಿನಲ್ಲಿ ಮುಖ ಮುಳುಗಿಸಿದ ತಕ್ಷಣ ಚರ್ಮಕ್ಕೆ ಒಂದು ರೀತಿಯ ಶಾಕ್ ಸಿಗುತ್ತದೆ. ಇದರಿಂದ ರಕ್ತಸಂಚಾರ ವೇಗಗೊಂಡು ಮುಖ ತಕ್ಷಣವೇ ರಿಫ್ರೆಶ್ ಆಗಿ ಕಾಣಿಸುತ್ತದೆ. ಸೋಮಾರಿತನ ಮತ್ತು ಆಯಾಸವನ್ನು ಓಡಿಸಲು ಇದೊಂದು ಉತ್ತಮ ಮಾರ್ಗ.
ಐಸ್ ನೀರು ಮುಖದ ಮೇಲಿನ ತೆರೆದ ರಂಧ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಅಥವಾ ಸಣ್ಣದಾಗಿಸಲು ನೆರವಾಗುತ್ತದೆ. ಇದರಿಂದ ಚರ್ಮವು ನಯವಾಗಿ ಕಾಣಿಸುತ್ತದೆ ಮತ್ತು ಮುಖಕ್ಕೆ ಮೇಕ್ಅಪ್ ಹಚ್ಚುವ ಮೊದಲು ಹೀಗೆ ಮಾಡುವುದರಿಂದ ಮೇಕ್ಅಪ್ ದೀರ್ಘಕಾಲ ಉಳಿಯುತ್ತದೆ.
ಈ ಅಭ್ಯಾಸದಲ್ಲಿ ಕೆಲವು ಮುನ್ನೆಚ್ಚರಿಕೆಗಳು ಬೇಕು. ಐಸ್ ನೀರನ್ನು ಸತತವಾಗಿ ೧೦-೧೫ ಸೆಕೆಂಡುಗಳಿಗಿಂತ ಹೆಚ್ಚು ಕಾಲ ಬಳಸಬಾರದು. ಅತಿಯಾದ ತಣ್ಣೀರು ಚರ್ಮದ ಸೂಕ್ಷ್ಮ ರಕ್ತನಾಳಗಳನ್ನು ಹಾನಿಗೊಳಿಸಬಹುದು. ನಿಮಗೇನಾದರೂ ‘ಸೋರಿಯಾಸಿಸ್’, ‘ರೊಸೇಸಿಯಾ’ ಅಥವಾ ಸೂಕ್ಷ್ಮ ಚರ್ಮ ಇದ್ದರೆ, ಈ ಸಾಹಸಕ್ಕೆ ಕೈಹಾಕದಿರುವುದು ಒಳಿತು.
ಐಸ್ ನೀರಿನ ಫೇಶಿಯಲ್ ಮುಖಕ್ಕೆ ತಕ್ಷಣದ ಫ್ರೆಶ್‌ನೆಸ್ ಮತ್ತು ಊತ ಕಡಿಮೆ ಮಾಡಲು ಉತ್ತಮ. ಆದರೆ, ಇದನ್ನು ಸೌಂದರ್ಯವರ್ಧಕದ ಖಾಯಂ ಪರಿಹಾರ ಎಂದು ಭಾವಿಸದೆ, ಸೀಮಿತವಾಗಿ ಬಳಸುವುದು ಸೂಕ್ತ.



