ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಹಾರ ಖಾದ್ಯ ಉತ್ಪನ್ನಗಳ ಪ್ಯಾಕೇಜಿಂಗ್ನಲ್ಲಿನ ಹೇಳಿಕೆಗಳು ಹಾಗೂ ಜಾಹೀರಾತುಗಳ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ನೆಸ್ಲೆ ಇಂಡಿಯಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಪ್ರಾಧಿಕಾರ ಇತೀಚೆಗೆ ಪ್ರಕಟಿಸಿದ್ದ ಪೋಸ್ಟ್ನಲ್ಲಿ ವಿವಿಧ ಕಂಪನಿಗಳ ಉತ್ಪನ್ನಗಳ ಲೇಬಲ್ಗಳಿಗೆ ಸಂಬಂಧಿಸಿದ ಅಂಶಗಳನ್ನು ಪ್ರಶ್ನಿಸಿತ್ತು. ಈ ಎಲ್ಲ ವಿಚಾರಗಳಿಗೆ ಸಂಬಂಧಿಸಿದಂತೆ FSSAIಗೆ ಈಗಾಗಲೇ ವಿವರವಾದ ಪ್ರತಿಕ್ರಿಯೆಯನ್ನು ಸಲ್ಲಿಸಿರುವುದಾಗಿ ನೆಸ್ಲೆ ಇಂಡಿಯಾ ತಿಳಿಸಿದೆ.
ನೆಸ್ಲೆ ಇಂಡಿಯಾದ ಮಕ್ಕಳ ಪೌಷ್ಟಿಕಾಂಶದ ಉತ್ಪನ್ನಗಳ ಪ್ಯಾಕೇಜಿಂಗ್ನಲ್ಲಿರುವ ಕೆಲವು ಹೇಳಿಕೆಗಳ ಬಗ್ಗೆ FSSAI ಪ್ರಶ್ನೆಗಳನ್ನು ಎತ್ತಿತ್ತು. ವಿಶೇಷವಾಗಿ, ಶಿಶು ಆಹಾರ ಉತ್ಪನ್ನಗಳಲ್ಲಿನ ಅಂಶಗಳು ರೋಗನಿರೋಧಕ ವ್ಯವಸ್ಥೆಗೆ ನೆರವಾಗುತ್ತವೆ ಎಂಬ ಹೇಳಿಕೆ ಹಾಗೂ ವೇ ಪ್ರೊಟೀನ್ ಸುಲಭವಾಗಿ ಜೀರ್ಣವಾಗುತ್ತದೆ ಎಂಬ ಹೇಳಿಕೆಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕ ಆಧಾರಗಳ ಕುರಿತು ಪ್ರಾಧಿಕಾರ ಸ್ಪಷ್ಟನೆ ಕೇಳಿತ್ತು. ಈ ಬೆಳವಣಿಗೆಯ ನಡುವೆಯೇ ಕಂಪನಿ ಸಮಗ್ರವಾದ ವಿವರಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ನೀಡಿದೆ.
ವೈರಲ್ ರೀಲ್ಗೂ ಕಂಪನಿಗೂ ಸಂಬಂಧವಿಲ್ಲ ಎಂದ ನೆಸ್ಲೆ
ಇದೇ ವೇಳೆ ವಿವಾದಕ್ಕೆ ಕಾರಣವಾಗಿರುವ ಸಾಮಾಜಿಕ ಜಾಲತಾಣದ ರೀಲ್ ಕುರಿತು ಕೂಡಾ ನೆಸ್ಲೆ ಇಂಡಿಯಾ ಸ್ಪಷ್ಟನೆ ನೀಡಿದೆ. ಆ ರೀಲ್ ಅನ್ನು ವ್ಯಕ್ತಿಯೊಬ್ಬರು ಸ್ವತಂತ್ರವಾಗಿ ಸಿದ್ಧಪಡಿಸಿರುವಂತೆ ಕಾಣುತ್ತಿದ್ದು, ರೀಲ್ ನಲ್ಲಿ ನೆಸ್ಲೆ ಇಂಡಿಯಾ ಭಾಗಿಯಾಗಿಲ್ಲ ಅಥವಾ ಯಾವುದೇ ರೀತಿಯ ಸಂಬಂಧ ಹೊಂದಿಲ್ಲ ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.



