ಹೊಸದಿಗಂತ ವರದಿ ಶಿರಸಿ:
ನದಿ ತಿರುವು ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗಳ ವಿಚಾರದಲ್ಲಿ ಜಿಲ್ಲೆಯ ಜನರಿಗೆ ಸ್ಪಷ್ಟತೆ ನೀಡದೆ, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಗೊಂದಲ ಮೂಡಿಸುತ್ತಿದ್ದಾರೆ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ತಮ್ಮ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಮಂಕಾಳ ವೈದ್ಯ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಅವರು ಜಿಲ್ಲೆಯ ಜನರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಅನುದಾನವಿಲ್ಲ, ಬರ ಪರಿಹಾರ ತಲುಪಿಲ್ಲ. ಇಂತಹ ಮೂಲಭೂತ ಸಮಸ್ಯೆ ಬಗೆಹರಿಸುವ ಬದಲು ಪರಿಸರ ಮಾರಕ ವಿವಾದಾತ್ಮಕ ಯೋಜನೆಗಳಿಗೆ ಸರ್ಕಾರ ಆಸಕ್ತಿ ತೋರಿಸುತ್ತಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದರು.
ಇದನ್ನೂ ಓದಿ:
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದಾಗಲೆಲ್ಲಾ ಬೇಡ್ತಿ-ವರದಾ ನದಿ ಜೋಡಣೆ ಹಾಗೂ ಶರಾವತಿ ಯೋಜನೆಯನ್ನೇ ಪ್ರಸ್ತಾಪಿಸುತ್ತಿದ್ದಾರೆ. ಜಿಲ್ಲೆಯ ಶಾಸಕರು ವೈಜ್ಞಾನಿಕ ಅಧ್ಯಯನ ನಡೆಸಿ, ಪಾರದರ್ಶಕ ವರದಿ ಬಂದ ನಂತರವೇ ನಿರ್ಧಾರ ಕೈಗೊಳ್ಳುವಂತೆ ಒತ್ತಡ ಹೇರಬೇಕು ಎಂದರು. ಇದೇ ವೇಳೆ, ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ, ಪ್ರಮುಖರಾದ ಉಷಾ ಹೆಗಡೆ ಹಾಗೂ ನವೀನ ಶೆಟ್ಟಿ ಚಿಪಗಿ ಉಪಸ್ಥಿತರಿದ್ದರು.



