October 23, 2026
Friday, October 23, 2026
spot_img

ಪೋಲೆಂಡ್ ಪ್ರಧಾನಿ ಜೊತೆ ಡಿಕೆಶಿ ಮಾತುಕತೆ: 2027ರ ಜಾಗತಿಕ ಹೂಡಿಕೆ ಸಮಾವೇಶಕ್ಕೆ ವಿಶೇಷ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕದ ಕೈಗಾರಿಕಾ ಕ್ಷೇತ್ರಕ್ಕೆ ಮತ್ತೊಂದು ಬಲ ಸಿಕ್ಕಿದ್ದು, 2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಹಭಾಗಿ ರಾಷ್ಟ್ರವಾಗಿ ಪಾಲ್ಗೊಳ್ಳುವಂತೆ ಪೋಲೆಂಡ್ ದೇಶಕ್ಕೆ ಅಧಿಕೃತ ಆಹ್ವಾನ ನೀಡಲಾಗಿದೆ.

ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ಶುಕ್ರವಾರ ನಡೆದ ರಾಜತಾಂತ್ರಿಕ ಭೇಟಿಯಲ್ಲಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಅವರಿಗೆ ಈ ಆಹ್ವಾನ ನೀಡಿದರು.

ಕೋಲಾರದಲ್ಲಿ ಪೋಲೆಂಡ್ ಸಂಸ್ಥೆಯ ಭಾರೀ ಹೂಡಿಕೆ

ಪೋಲೆಂಡ್ ಮೂಲದ ಪ್ರಖ್ಯಾತ ಟಿಜೆಡ್‌ಎಂಒ ಸಂಸ್ಥೆಯು ಕೋಲಾರದ ಕೆಐಎಡಿಬಿ (KIADB) ವೇಮಗಲ್ ಕೈಗಾರಿಕಾ ಪ್ರದೇಶದ 5 ಎಕರೆ ಜಾಗದಲ್ಲಿ ತನ್ನ ನೂತನ ಘಟಕವನ್ನು ಸ್ಥಾಪಿಸುತ್ತಿದೆ.

ಸ್ಯಾನಿಟರಿ ನ್ಯಾಪ್ಕಿನ್, ಡಯಾಪರ್ ಹಾಗೂ ಕಾಸ್ಮೆಟಿಕ್ಸ್ ಸೇರಿದಂತೆ ವಿವಿಧ ವೈಯಕ್ತಿಕ ಶೌಚ ವಸ್ತುಗಳನ್ನು ತಯಾರಿಸುವ ಈ ಘಟಕಕ್ಕಾಗಿ 80 ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದ್ದು, ಇದರಿಂದ ಸುಮಾರು 1,000 ಜನರಿಗೆ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಈ ಪ್ರಸ್ತಾಪವನ್ನು ಸಿಎಂ ಡಿ.ಕೆ. ಶಿವಕುಮಾರ್ ಮುಕ್ತವಾಗಿ ಸ್ವಾಗತಿಸಿದ್ದಾರೆ.

ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್ ಒಪ್ಪಂದ

ಕರ್ನಾಟಕ ಹಾಗೂ ಪೋಲೆಂಡ್ ನಡುವಿನ ತಾಂತ್ರಿಕ ಸಂಬಂಧವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪೋಲೆಂಡ್‌ನ ಕೆಟೋವೈಸ್ ನಗರದ ವಾಣಿಜ್ಯ ಮಂಡಳಿ ಹಾಗೂ ‘ಕೆಟೋ ಡಾಟ್ ಹಬ್’ ಗೇಮಿಂಗ್ ಟೆಕ್ನಾಲಜಿ ಸಂಸ್ಥೆಯೊಂದಿಗೆ ಕರ್ನಾಟಕ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಗೇಮಿಂಗ್ ಹಾಗೂ ಡೀಪ್ ಟೆಕ್ ಕ್ಷೇತ್ರಗಳಲ್ಲಿ ಜಂಟಿ ಸಹಕಾರದೊಂದಿಗೆ ‘ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್’ ಸ್ಥಾಪಿಸಲು ಮುಂದಾಗಿದೆ.

ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆಗೆ ಕರೆ

ಬೆಂಗಳೂರು ಜಾಗತಿಕ ತಂತ್ರಜ್ಞಾನದ ಹಬ್ ಆಗಿರುವುದರಿಂದ, ಪೋಲೆಂಡ್‌ನ ಪ್ರಮುಖ ತಂತ್ರಜ್ಞಾನ ಕಂಪನಿಗಳು ರಾಜ್ಯದ ಎಐ, ಸಾಫ್ಟ್‌ವೇರ್, ರೋಬೋಟಿಕ್ಸ್, ಸ್ಮಾರ್ಟ್ ಮ್ಯಾನುಫ್ಯಾಕ್ಚರಿಂಗ್, ಸ್ಟಾರ್ಟ್‌ಅಪ್ ಇನ್ನೋವೇಶನ್ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವಂತೆ ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

ಇದನ್ನೂ ಓದಿ:

ಜಾಗತಿಕ ಹೂಡಿಕೆದಾರರ ಸಮಾವೇಶ 2027

ಕರ್ನಾಟಕದ ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶವು 2027ರ ಏಪ್ರಿಲ್ 20ರಿಂದ 23ರವರೆಗೆ ಬೆಂಗಳೂರಿನಲ್ಲಿ ಆಯೋಜನೆಗೊಳ್ಳಲಿದೆ. ಈ ಹಿಂದೆ 2025ರ ಫೆಬ್ರವರಿಯಲ್ಲಿ ನಡೆದಿದ್ದ ಸಮಾವೇಶದಲ್ಲೂ ಪೋಲೆಂಡ್ ಸೇರಿದಂತೆ ಜಗತ್ತಿನ 19 ದೇಶಗಳು ಪಾಲುದಾರರಾಗಿ ಭಾಗವಹಿಸಿದ್ದವು.

Must Read