October 23, 2026
Friday, October 23, 2026
spot_img

ಬಿಹಾರದಲ್ಲಿ ಪಟಾಕಿ ಗೋಡೌನ್ ಬ್ಲಾಸ್ಟ್: ನಾಲ್ಕು ಮಂದಿ ಸಾ*ವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಶುಕ್ರವಾರ ಇಲ್ಲಿನ ಜನನಿಬಿಡ ಪ್ರದೇಶದಲ್ಲಿರುವ ಪಟಾಕಿ ಉದ್ಯಮಿಯೊಬ್ಬರ ಮನೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದು, ಮೂವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಸ್ಫೋಟದ ತೀವ್ರತೆಗೆ ಇಡೀ ಮನೆ ಕುಸಿದುಬಿದ್ದಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆದರೆ, ಅವಶೇಷಗಳ ಮಧ್ಯೆ ಪಟಾಕಿಗಳು ಸ್ಫೋಟಗೊಳ್ಳುತ್ತಿರುವುದರಿಂದ ರಕ್ಷಣಾ ಸಿಬ್ಬಂದಿಗೆ ಭಾರೀ ಅಡ್ಡಿಯಾಗಿದೆ.

ಮನೆಯಲ್ಲೇ ಇತ್ತು ಅಕ್ರಮ ಪಟಾಕಿ ದಾಸ್ತಾನು

ಸ್ಥಳೀಯ ನಿವಾಸಿ ಹಾಗೂ ಪಟಾಕಿ ವ್ಯಾಪಾರಿ ಮೊಹಮ್ಮದ್ ಅಮೀರುದ್ದೀನ್ ಮಿಯಾನ್ ಎಂಬುವವರ ಮನೆಯಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಲಾಗಿತ್ತು. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೊದಲು ಪಟಾಕಿಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಇದು ಸರಣಿ ಸ್ಫೋಟಕ್ಕೆ ಕಾರಣವಾಯಿತು.

ಈ ಸ್ಫೋಟಗಳು ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಮುಂದುವರಿದಿದ್ದರಿಂದ ಇಡೀ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಫೋಟದ ಭೀಕರತೆಗೆ ಮನೆಯ ಮುಂಭಾಗ ಸಂಪೂರ್ಣವಾಗಿ ಧ್ವಂಸಗೊಂಡು ರಸ್ತೆಗೆ ಬಿದ್ದಿದೆ.

ದೇಹಗಳು ಛಿದ್ರ ಛಿದ್ರ, ಮೂವರ ಪತ್ತೆಗೆ ತಲಾಶ್

ಸಿವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭರತ್ ಸೋನಿ ಅವರು ನಾಲ್ಕು ಸಾವುಗಳನ್ನು ಖಚಿತಪಡಿಸಿದ್ದಾರೆ. ಗ್ರಾಮದ ಮುಖ್ಯಸ್ಥರ ಪ್ರಕಾರ, ಸ್ಫೋಟದ ಸಮಯದಲ್ಲಿ ಮನೆಯೊಳಗೆ ಒಂದೇ ಕುಟುಂಬದ ಏಳು ಸದಸ್ಯರಿದ್ದರು. ನಾಲ್ಕು ಶವಗಳು ಪತ್ತೆಯಾಗಿದ್ದು, ಇನ್ನುಳಿದ ಮೂವರು ಏನಾಗಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ಫೋಟದ ತೀವ್ರತೆಗೆ ಶವಗಳು ತೀವ್ರವಾಗಿ ಛಿದ್ರಗೊಂಡಿದ್ದು, ಗುರುತು ಹಿಡಿಯುವುದು ಕಷ್ಟಕರವಾಗಿದೆ ಎಂದು ವರದಿಗಳು ತಿಳಿಸಿವೆ.

200 ಮೀಟರ್ ದೂರವಿರಲು ಪೊಲೀಸರ ಮನವಿ

ಸ್ಥಳಕ್ಕೆ ಅಗ್ನಿಶಾಮಕ ದಳ, ವೈದ್ಯಕೀಯ ತಂಡ, ವಿದ್ಯುತ್ ಇಲಾಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಧಾವಿಸಿದ್ದಾರೆ. ಇಡೀ ಪ್ರದೇಶವನ್ನು ಪೊಲೀಸರು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದಾರೆ. ಮನೆಯೊಳಗೆ ಇನ್ನೂ ಸ್ಫೋಟಕ ವಸ್ತುಗಳು ಇರುವುದರಿಂದ ಮತ್ತು ಸಣ್ಣ ಪ್ರಮಾಣದಲ್ಲಿ ಸ್ಫೋಟವಾಗುತ್ತಿರುವುದರಿಂದ, ಗ್ರಾಮಸ್ಥರು ಘಟನಾ ಸ್ಥಳದಿಂದ ಕನಿಷ್ಠ 200 ಮೀಟರ್ ದೂರವಿರಬೇಕು ಎಂದು ಎಸ್ಪಿ ಭರತ್ ಸೋನಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ತನಿಖೆಗೆ ಆದೇಶ, ಲೈಸೆನ್ಸ್ ಪರಿಶೀಲನೆ

ಈ ಪಟಾಕಿ ಘಟಕವು ಕಾನೂನುಬಾಹಿರವೇ ಅಥವಾ ಪರವಾನಗಿ ಹೊಂದಿದ್ದೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸ್ಥಳೀಯರ ಪ್ರಕಾರ ಈ ಕುಟುಂಬವು 20 ವರ್ಷಗಳಿಂದ ಹಳೆಯ ಲೈಸೆನ್ಸ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಿತ್ತು ಎಂದು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಎಫ್‌ಐಆರ್ ದಾಖಲಿಸಿ, ಪರಿಶೀಲನೆಯಲ್ಲಿ ಲೋಪವೆಸಗಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಎಸ್ಪಿ ತಿಳಿಸಿದ್ದಾರೆ. ಈ ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ಸದ್ಯಕ್ಕೆ ಲಭ್ಯವಾಗಿಲ್ಲ.

Must Read