October 23, 2026
Friday, October 23, 2026
spot_img

ಮೆಕ್ಕಾ–ಮದೀನಾದಲ್ಲಿ ಕನ್ನಡಿಗರ ಪರದಾಟ: ವಿದೇಶಾಂಗ ಸಚಿವರಿಗೆ ಸಿಎಂ ಡಿಕೆಶಿ ಪತ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಪವಿತ್ರ ನಗರಗಳಾದ ಮೆಕ್ಕಾ ಮತ್ತು ಮದೀನಾದಲ್ಲಿ ಕರ್ನಾಟಕದ 600ಕ್ಕೂ ಹೆಚ್ಚು ಉಮ್ರಾ ಯಾತ್ರಿಕರು ಸಿಲುಕಿಕೊಂಡಿದ್ದಾರೆ. ಇವರನ್ನು ಸುರಕ್ಷಿತವಾಗಿ ಮತ್ತು ಆದಷ್ಟು ಬೇಗ ಭಾರತಕ್ಕೆ ಕರೆತರಲು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳು, ಸಂಕಷ್ಟದಲ್ಲಿರುವ ಯಾತ್ರಿಕರಿಗೆ ಅಗತ್ಯ ನೆರವು ಒದಗಿಸುವಂತೆ ಕೋರಿದ್ದಾರೆ.

ವಿಮಾನ ಸೇವೆ ಸ್ಥಗಿತದಿಂದ ಸಂಕಷ್ಟ

ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಿಗೆ ವಾಪಸ್‌ ಬರಬೇಕಿದ್ದ ವಿಮಾನಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ಯಾತ್ರಿಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಿಎಂ ಡಿಕೆಶಿ ಪತ್ರದಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರು ಹಾಗೂ ಅವರ ತಂಡ ಇತ್ತೀಚೆಗೆ ಪವಿತ್ರ ನಗರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾತ್ರಿಕರ ಸಂಕಷ್ಟದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಹಲವರು ತಮ್ಮ ಬಳಿ ಇದ್ದ ಹಣವನ್ನು ಖರ್ಚು ಮಾಡಿದ್ದು, ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಿಕೊಳ್ಳಲು ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:

ಕೆಲವು ಹೋಟೆಲ್‌ಗಳು ಕೊಠಡಿಗಳನ್ನು ಖಾಲಿ ಮಾಡುವಂತೆ ಯಾತ್ರಿಕರಿಗೆ ಸೂಚಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಸ್ಥಳೀಯವಾಗಿ ಭಾರತೀಯರು ಹಾಗೂ ಕರ್ನಾಟಕದ ಸ್ವಯಂಸೇವಾ ಸಂಘಟನೆಗಳು ನೀಡುತ್ತಿರುವ ತಾತ್ಕಾಲಿಕ ನೆರವು ಎಲ್ಲರ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ವಿಶೇಷ ವಿಮಾನಗಳ ವ್ಯವಸ್ಥೆಗೆ ಮನವಿ

ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಜೆಡ್ಡಾದಲ್ಲಿರುವ ಭಾರತೀಯ ಕಾನ್ಸುಲೇಟ್ ಸೌದಿ ಅರೇಬಿಯಾ ಸರ್ಕಾರ, ವಿಮಾನಯಾನ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಯಾತ್ರಿಕರ ಸುರಕ್ಷಿತ ವಾಪಸಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಅಗತ್ಯವಿದ್ದಲ್ಲಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡುವುದರ ಜೊತೆಗೆ, ಭಾರತಕ್ಕೆ ಮರಳುವವರೆಗೆ ಆಹಾರ ಮತ್ತು ವಸತಿ ಸೇರಿದಂತೆ ಮಧ್ಯಂತರ ನೆರವು ಒದಗಿಸಬೇಕು ಎಂದೂ ಕೋರಿದ್ದಾರೆ.

ಯಾತ್ರಿಕರ ಸುರಕ್ಷತೆಗೆ ಆದ್ಯತೆ

ಸಂಕಷ್ಟದಲ್ಲಿರುವವರ ಪರಿಸ್ಥಿತಿಯನ್ನು ಗಮನಿಸಿ ಈ ವಿಚಾರಕ್ಕೆ ಅತ್ಯುನ್ನತ ಆದ್ಯತೆ ನೀಡುವಂತೆ ಸಿಎಂ ಡಿಕೆಶಿ ಮನವಿ ಮಾಡಿದ್ದಾರೆ. ಯಾತ್ರಿಕರನ್ನು ಸುರಕ್ಷಿತವಾಗಿ ಮರಳಿ ಕರೆತರಲು ಕರ್ನಾಟಕ ಸರ್ಕಾರ ಕೇಂದ್ರದೊಂದಿಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

Must Read