October 24, 2026
Saturday, October 24, 2026
spot_img

ಮುಂಬೈ ಇಂಡಿಯನ್ಸ್‌ನ ನೂತನ ಹೆಡ್ ಕೋಚ್ ಆಗಿ ಕೀರನ್ ಪೊಲಾರ್ಡ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್, ಮುಂಬರುವ 2027ರ ಐಪಿಎಲ್ ಸೀಸನ್‌ಗಾಗಿ ತನ್ನ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಕೀರನ್ ಪೊಲಾರ್ಡ್ ಅವರನ್ನು ತಂಡದ ನೂತನ ಮುಖ್ಯ ತರಬೇತುದಾರರಾಗಿ ನೇಮಕ ಮಾಡಿದೆ. ಈ ಮೂಲಕ ಮುಂಬೈ ಪಡೆ ಹಾಗೂ ಪೊಲಾರ್ಡ್ ನಡುವಿನ 16 ವರ್ಷಗಳ ಬಾಂಧವ್ಯದಲ್ಲಿ ಹೊಸದೊಂದು ಅಧ್ಯಾಯ ಶುರುವಾಗಿದೆ.

ಕಳೆದ ವಾರವಷ್ಟೇ ಶ್ರೀಲಂಕಾದ ದಂತಕಥೆ ಮಹೇಲ ಜಯವರ್ಧನೆ ಅವರು ತಮ್ಮ ಎರಡನೇ ಅವಧಿಯ ಮುಖ್ಯ ತರಬೇತುದಾರ ಜವಾಬ್ದಾರಿಯನ್ನು ಪೂರ್ಣಗೊಳಿಸಿ ನಿರ್ಗಮಿಸಿದ್ದರು. ಅವರ ನಿರ್ಗಮನದ ಬೆನ್ನಲ್ಲೇ, ತಂಡದ ರಣತಂತ್ರಗಳನ್ನು ಹತ್ತಿರದಿಂದ ಬಲ್ಲ ಹಾಗೂ ಫ್ರಾಂಚೈಸಿಯ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಅರಿತಿರುವ ಪೊಲಾರ್ಡ್ ಅವರಿಗೆ ಮುಖ್ಯ ಕೋಚ್ ಆಗಿ ಬಡ್ತಿ ನೀಡಲಾಗಿದೆ.

2022ರಲ್ಲಿ ಐಪಿಎಲ್ ಆಟಗಾರರಾಗಿ ನಿವೃತ್ತಿ ಪಡೆದ ಪೊಲಾರ್ಡ್, ಕಳೆದ ನಾಲ್ಕು ಸೀಸನ್‌ಗಳಿಂದ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆಟಗಾರರ ಮನಸ್ಥಿತಿ ಮತ್ತು ಡ್ರೆಸ್ಸಿಂಗ್ ರೂಮ್ ವಾತಾವರಣವನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಇವರು, ಈಗ ಮುಖ್ಯ ತರಬೇತುದಾರರಾಗಿ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.

ವೆಸ್ಟ್ ಇಂಡೀಸ್‌ನ ದೈತ್ಯ ಆಟಗಾರ ಕೀರನ್ ಪೊಲಾರ್ಡ್, ಮುಂಬೈ ಇಂಡಿಯನ್ಸ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆಟಗಾರ. 2010 ರಿಂದ 2022ರ ವರೆಗೆ 13 ವರ್ಷಗಳ ಕಾಲ ಮುಂಬೈ ತಂಡವನ್ನು ಮಾತ್ರ ಪ್ರತಿನಿಧಿಸಿದ್ದ ಅವರು, 189 ಪಂದ್ಯಗಳಿಂದ 3,412 ರನ್ ಹಾಗೂ 69 ವಿಕೆಟ್ ಕಬಳಿಸಿದ್ದಾರೆ. ವಿಶೇಷವೆಂದರೆ, ಮುಂಬೈ ಇಂಡಿಯನ್ಸ್ ಗೆದ್ದ ಎಲ್ಲಾ 5 ಐಪಿಎಲ್ ಟ್ರೋಫಿ (2013, 2015, 2017, 2019, 2020) ವಿಜೇತ ತಂಡಗಳಲ್ಲಿ ಪೊಲಾರ್ಡ್ ಪ್ರಮುಖ ಆಧಾರಸ್ತಂಭವಾಗಿದ್ದರು. ಈಗ ಕೋಚ್ ರೂಪದಲ್ಲಿ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರಿಸಲು ಸಜ್ಜಾಗಿದ್ದಾರೆ.

Must Read

Skip to toolbar