ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ, ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೃಷ್ಟಿಸಿರುವ ಅಲೆ ಅಷ್ಟಿಷ್ಟಲ್ಲ. ದಸರಾ ಹಬ್ಬದ ರಜೆಗಳನ್ನು ಸಂಪೂರ್ಣವಾಗಿ ಬಳಸಿಕೊಂಡ ಈ ಚಿತ್ರವು ಕೇವಲ ಒಂಬತ್ತು ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ 628 ಕೋಟಿ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.
ಬಿಡುಗಡೆಯಾದ ಮೊದಲ ನಾಲ್ಕು ದಿನಗಳಲ್ಲೇ 400 ಕೋಟಿ ಗಡಿ ದಾಟಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಸಕ್ಕತ್ ಸದ್ದು ಮಾಡಿತು. ದಸರಾ ಹಬ್ಬದ ರಜೆಯ ಸಂಪೂರ್ಣ ಲಾಭ ಪಡೆದ ಚಿತ್ರತಂಡ, ವಾರದ ಮಧ್ಯದಲ್ಲಿ ಸ್ವಲ್ಪ ಮಂದಗತಿಯನ್ನು ಕಂಡರೂ ಶುಕ್ರವಾರದ ವೇಳೆಗೆ ಮತ್ತೆ ಚೇತರಿಸಿಕೊಂಡಿತು. ಮೊದಲ ವಾರದಲ್ಲೇ ವಿಶ್ವಾದ್ಯಂತ 500 ಕೋಟಿ ಕ್ಲಬ್ ಸೇರಿದ್ದ ಜೈಲರ್ 2, ಸದ್ಯ 600 ಕೋಟಿ ಗಡಿಯನ್ನು ಯಶಸ್ವಿಯಾಗಿ ದಾಟಿದೆ.
ಒಂಬತ್ತನೇ ದಿನವಾದ ಶುಕ್ರವಾರದಂದು ಭಾರತೀಯ ಮಾರುಕಟ್ಟೆಯಲ್ಲಿಯೇ 14.50 ಕೋಟಿ ನೆಟ್ ಕಲೆಕ್ಷನ್ ಮಾಡುವ ಮೂಲಕ, ದೇಶೀಯ ಒಟ್ಟು ಗಳಿಕೆಯನ್ನು 348.85 ಕೋಟಿಗೆ ತಲುಪಿಸಿದೆ. ಈ ಮೂಲಕ ಭಾರತದ ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆ ಮಾಡಿದ ಅಗ್ರ 20 ಸಿನಿಮಾಗಳ ಪಟ್ಟಿಯಲ್ಲಿ ಜೈಲರ್ 2 ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಈ ಯಶಸ್ಸಿನ ಹಾದಿಯಲ್ಲಿ ಜೈಲರ್ ೨ ಹಲವು ದೊಡ್ಡ ಸಿನಿಮಾಗಳ ದಾಖಲೆಗಳನ್ನು ಪುಡಿಗಟ್ಟಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಬ್ಲಾಕ್‌ಬಸ್ಟರ್ ಚಿತ್ರ ‘ಸುಲ್ತಾನ್’ (623 ಕೋಟಿ) ಗಳಿಕೆಯನ್ನು ಹಿಂದಿಕ್ಕಿ ರಜನಿ ಸಿನಿಮಾ 20ನೇ ಸ್ಥಾನವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲದೆ, ಇತ್ತೀಚಿನ ದೊಡ್ಡ ಹಿಟ್ ಸಿನಿಮಾಗಳಾದ ‘ಸಲಾರ್’ (617 ಕೋಟಿ) ಮತ್ತು ‘ಸೈಯಾರಾ’ (578 ಕೋಟಿ) ಚಿತ್ರಗಳ ಕಲೆಕ್ಷನ್ ಮೊತ್ತವನ್ನೂ ಸಹ ಈ ಸಿನಿಮಾ ಈಗಾಗಲೇ ಮೀರಿಸಿದೆ.
ಕೇವಲ ಭಾರತದಲ್ಲಷ್ಟೇ ಅಲ್ಲದೆ, ವಿದೇಶಗಳಲ್ಲೂ ಜೈಲರ್ 2 ಸಿನಿಮಾಗೆ ಭಾರೀ ಪ್ರತಿಕ್ರಿಯೆ ಸಿಕ್ಕಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರೋಬ್ಬರಿ 23 ಮಿಲಿಯನ್ ಡಾಲರ್ ಕಲೆಕ್ಷನ್ ಮಾಡುವ ಮೂಲಕ ದೇಶೀಯ ಮಾರುಕಟ್ಟೆಗೆ ಸೆಡ್ಡು ಹೊಡೆದಿದೆ. ಒಟ್ಟಾರೆಯಾಗಿ, ಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾದ ಈ ಆಕ್ಷನ್ ಮನರಂಜನಾ ಚಿತ್ರವು ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಮಾರುಕಟ್ಟೆಯಲ್ಲೂ ತನ್ನ ವಿಜಯ ಯಾತ್ರೆಯನ್ನು ಮುಂದುವರಿಸಿದೆ.



