ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬದ ಶುಭ ದಿನದಂದು ಅಡ್ವಾನ್ಸ್ ಬುಕಿಂಗ್ ಆರಂಭಿಸಿದ ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ, ಬಿಡುಗಡೆಗೆ 15 ದಿನಗಳ ಮುಂಚಿತವಾಗಿಯೇ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಕೇವಲ ಐದೇ ದಿನಗಳಲ್ಲಿ ಪ್ರೇಕ್ಷಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಟಿಕೆಟ್ ಮಾರಾಟದಲ್ಲಿ ಸಿನಿಮಾ ಹೊಸ ಮೈಲಿಗಲ್ಲು ಸಾಧಿಸುತ್ತಿದೆ.
ಪ್ರಸ್ತುತ ಲಭ್ಯವಿರುವ ಮಾಹಿತಿಯಂತೆ, ಚಿತ್ರವು ಮುಂಗಡ ಬುಕಿಂಗ್ ಮೂಲಕ ಈಗಾಗಲೇ ಭರ್ಜರಿ 8.72 ಕೋಟಿ ಗಳಿಸಿದೆ. ದೇಶಾದ್ಯಂತ ಸುಮಾರು 2 ಲಕ್ಷ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಆರಂಭದಲ್ಲಿ ಹಿಂದಿ ಆವೃತ್ತಿಯಷ್ಟೇ ಸದ್ದು ಮಾಡುತ್ತಿತ್ತಾದರೂ, ಕಳೆದ ಎರಡು ದಿನಗಳಿಂದ ಕನ್ನಡ ಮತ್ತು ತೆಲುಗು ಭಾಷೆಗಳಲ್ಲೂ ಪ್ರದರ್ಶನಗಳು ಆರಂಭವಾಗಿವೆ.
ಕರ್ನಾಟಕದ ಸುಮಾರು 100 ಪರದೆಗಳಲ್ಲಿ ಕನ್ನಡ ಆವೃತ್ತಿಯ ಬುಕಿಂಗ್ ಶುರುವಾಗಿದ್ದು, ಈಗಾಗಲೇ 1 ಕೋಟಿ ಗಳಿಕೆಯತ್ತ ಹೆಜ್ಜೆ ಹಾಕುತ್ತಿದೆ. ಕೆಲವು ಚಿತ್ರಮಂದಿರಗಳಲ್ಲಿ ಬೆಳಗಿನ ಪ್ರದರ್ಶನಗಳಿಗೆ ಶೇ. 72ರಷ್ಟು ಆಕ್ಯುಪೆನ್ಸಿ ಕಂಡುಬರುತ್ತಿದೆ. ತೆಲುಗಿನಲ್ಲಿ ಸದ್ಯ 10-15 ಪ್ರದರ್ಶನಗಳು ಮಾತ್ರ ತೆರೆದಿದ್ದು, ಮುಂದಿನ ದಿನಗಳಲ್ಲಿ ಇತರೆ ಪ್ರಾದೇಶಿಕ ಭಾಷೆಗಳ ಬುಕಿಂಗ್ ಭರದಿಂದ ಆರಂಭವಾಗಲಿದೆ.
ಈ ಮುಂಗಡ ಬುಕಿಂಗ್ ಧಮಾಕಾಗೆ ಮುಖ್ಯ ಕಾರಣ ‘ಐಮ್ಯಾಕ್ಸ್’ ಮತ್ತು ‘4DX’ ನಂತಹ ಪ್ರೀಮಿಯಂ ತಂತ್ರಜ್ಞಾನದ ಪರದೆಗಳು. ಇಡೀ ದೇಶದಲ್ಲಿ ಐಮ್ಯಾಕ್ಸ್ ಶೋಗಳು ಕೇವಲ ಶೇ. 3.8 ರಷ್ಟಿದ್ದರೂ, ಒಟ್ಟು ಗಳಿಕೆಯಲ್ಲಿ ಶೇ. 25 ರಷ್ಟು ಕೊಡುಗೆ ನೀಡಿವೆ.
ಸಾಮಾನ್ಯ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆ ಸರಾಸರಿ 380 ಇದ್ದು, ಪ್ರತಿ ಪ್ರದರ್ಶನಕ್ಕೆ 35 ಟಿಕೆಟ್‌ಗಳು ಮಾರಾಟವಾಗಿವೆ. ಆದರೆ ಐಮ್ಯಾಕ್ಸ್‌ನಲ್ಲಿ ಟಿಕೆಟ್ ಬೆಲೆ ಸರಾಸರಿ 1,095 ಇದ್ದರೂ, ಪ್ರತಿ ಪ್ರದರ್ಶನಕ್ಕೆ 170 ಟಿಕೆಟ್‌ಗಳು ಮಾರಾಟವಾಗಿವೆ. ಅಂದರೆ ಸಾಮಾನ್ಯ ಪ್ರದರ್ಶನಗಳಿಗಿಂತ ಐಮ್ಯಾಕ್ಸ್‌ನಲ್ಲಿ ಟಿಕೆಟ್ ಮಾರಾಟ ಐದು ಪಟ್ಟು ಹೆಚ್ಚಾಗಿದೆ. ದೇಶದ ಹಲವು ಕಡೆ ಶೋಗಳು ಈಗಾಗಲೇ ಹೌಸ್‌ಫುಲ್ ಆಗಿದ್ದು, ಸಿನಿಮಾ ರಿಲೀಸ್ ಹೊತ್ತಿಗೆ ಪ್ರೇಕ್ಷಕರ ಉತ್ಸಾಹ ಇನ್ನಷ್ಟು ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.



