ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದ ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ಬಿಹಾರದ ಮೊದಲ ಮುಖ್ಯಮಂತ್ರಿ ಡಾ. ಕೃಷ್ಣ ಸಿಂಗ್ ಅವರ 139ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ಮಾಡಿದರು. ಈ ಸಂದರ್ಭದಲ್ಲಿ ಅವರು ಬಳಸಿದ ಹೇಳಿಕೆಯೊಂದು ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು.
ಭಾಷಣದ ವೇಳೆ ಆಕ್ಷೇಪ: ಖರ್ಗೆ ತೀಕ್ಷ್ಣ ಪ್ರತಿಕ್ರಿಯೆ
ಪ್ರಧಾನಿ ಮೋದಿ ಕುರಿತು ಖರ್ಗೆ ಮಾತನಾಡುತ್ತಿದ್ದಾಗ ಸಭಿಕರಲ್ಲಿದ್ದ ವ್ಯಕ್ತಿಯೊಬ್ಬರು ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಪ್ರಧಾನಿ ಎಲ್ಲಿಗೂ ಹೋಗುವುದಿಲ್ಲ ಎಂದು ಅವರು ಪ್ರತಿಕ್ರಿಯಿಸಿದಾಗ, ಖರ್ಗೆ ಕೋಪದಿಂದಲೇ ಮೋದಿ ಮಾತ್ರವಲ್ಲ, ಅವರ ಅಪ್ಪನೂ ಕೂಡ ಹೋಗುತ್ತಾರೆ ಎಂದು ಕಟುವಾದ ಮಾತುಗಳ ಮೂಲಕ ಉತ್ತರಿಸಿದರು.ಅವರ ಹೇಳಿಕೆಯಿಂದ ಸ್ಥಳದಲ್ಲಿ ಮಾತಿನ ಚಕಮಕಿ ನಡೆದಿದ್ದು, ಆಕ್ಷೇಪ ವ್ಯಕ್ತಪಡಿಸಿದ ವ್ಯಕ್ತಿಯ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ವರದಿಗಳೂ ಪ್ರಕಟವಾಗಿವೆ. ಘಟನೆಯ ಕುರಿತು ಸ್ವತಂತ್ರ ದೃಢೀಕರಣ ಲಭ್ಯವಿಲ್ಲದ ಕಾರಣ, ಈ ವರದಿಯನ್ನು ಕೇವಲ ಆರೋಪವಾಗಿ ಪರಿಗಣಿಸಬೇಕಿದೆ.
ಇದನ್ನೂ ಓದಿ:
SIR ವಿರುದ್ಧ ಖರ್ಗೆ ವಾಗ್ದಾಳಿ
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ವಿರೋಧಿಸಿದ ಖರ್ಗೆ, ಇದರಿಂದ ಮತದಾರರ ಹಕ್ಕುಗಳಿಗೆ ಧಕ್ಕೆಯಾಗುವ ಆತಂಕವಿದೆ ಎಂದು ಆರೋಪಿಸಿದರು. ಜನರನ್ನು ದಾರಿ ತಪ್ಪಿಸಲು ಆಡಳಿತಾರೂಢ ಪಕ್ಷ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಟೀಕಿಸಿದ ಅವರು, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಿದರು. ಇವಿಎಂ ಬಳಕೆಯ ಬದಲಿಗೆ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಿದರು.



