ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಚರ್ಚೆ ತೀವ್ರಗೊಂಡಿರುವ ಬೆನ್ನಲ್ಲೇ, ಉದ್ಯಮಿ ಮೋಹನ್ದಾಸ್ ಪೈ ಸರ್ಕಾರಕ್ಕೆ ಮಹತ್ವದ ಸಲಹೆ ನೀಡಿದ್ದಾರೆ.
ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ದೊರೆಯಬೇಕು ಎಂಬುದು ಸರಿಯಾದ ಬೇಡಿಕೆಯಾದರೂ, ಅದಕ್ಕೆ ಪೂರಕವಾಗಿ ಗುಣಮಟ್ಟದ ಶಿಕ್ಷಣ, ಉದ್ಯೋಗಾಧಾರಿತ ತರಬೇತಿ ಮತ್ತು ಅಗತ್ಯ ಕೌಶಲಗಳನ್ನು ಬೆಳೆಸುವತ್ತ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಯುವಕರ ಶಿಕ್ಷಣಕ್ಕೆ ಆದ್ಯತೆ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣದ ಒಟ್ಟು ದಾಖಲಾತಿ ಅನುಪಾತ (GER) ಕಡಿಮೆಯಿರುವುದನ್ನು ಉಲ್ಲೇಖಿಸಿರುವ ಪೈ, ಈ ಪ್ರದೇಶದ ಯುವಕರಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ಅಗತ್ಯವಿದೆ ಎಂದಿದ್ದಾರೆ. ತಾಂತ್ರಿಕ ಜ್ಞಾನದ ಜೊತೆಗೆ ಸಂವಹನ ಕೌಶಲ, ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ ಸೇರಿದಂತೆ ಸಾಫ್ಟ್ ಸ್ಕಿಲ್ಸ್ಗಳನ್ನು ಬೆಳೆಸುವುದೂ ಉದ್ಯೋಗ ಪಡೆಯಲು ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹೊಸ ತಂತ್ರಜ್ಞಾನಗಳು ಉದ್ಯೋಗ ಕ್ಷೇತ್ರವನ್ನು ವೇಗವಾಗಿ ಬದಲಾಯಿಸುತ್ತಿರುವ ಸಂದರ್ಭದಲ್ಲಿ, ಯುವಕರಿಗೆ ಕಾಲಕ್ಕೆ ತಕ್ಕ ತರಬೇತಿ ನೀಡಬೇಕು. ಕೇವಲ ಪದವಿ ಪಡೆಯುವುದಷ್ಟೇ ಅಲ್ಲದೆ, ಉದ್ಯಮಗಳ ಅಗತ್ಯಕ್ಕೆ ಹೊಂದುವ ಕೌಶಲಗಳನ್ನು ಕಲಿಸುವ ವ್ಯವಸ್ಥೆ ರೂಪಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ನೇಮಕಕ್ಕೆ ಆಗ್ರಹ
ಸರ್ಕಾರಿ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿಯ ಕೊರತೆ ಮತ್ತು ಅತಿಥಿ ಉಪನ್ಯಾಸಕರ ಮೇಲಿನ ಅವಲಂಬನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪೈ, ಕಾಯಂ ಬೋಧಕ ಸಿಬ್ಬಂದಿಯನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಶಿಕ್ಷಣದ ಗುಣಮಟ್ಟ ಸುಧಾರಿಸಿದಾಗ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ಯುವಕರಿಗೂ ಉದ್ಯೋಗ ಸ್ಪರ್ಧೆಯಲ್ಲಿ ಉತ್ತಮ ಅವಕಾಶ ಸಿಗಲಿದೆ ಎಂಬುದು ಅವರ ಅಭಿಪ್ರಾಯ.
ಇತ್ತೀಚೆಗೆ ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಯುವತಿಯೊಬ್ಬರು ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡಿಗರ ಹಕ್ಕು ಮತ್ತು ಉದ್ಯೋಗಾವಕಾಶಗಳನ್ನು ಕಡೆಗಣಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು.



