October 26, 2026
Monday, October 26, 2026
spot_img

ಕಬ್ಬು ಬೆಳೆಗಾರರು–ಸಕ್ಕರೆ ಕಾರ್ಖಾನೆಗಳ ನಡುವೆ ಸಂಘರ್ಷ ಬೇಡ: ಸೌಹಾರ್ದಯುತ ಪರಿಹಾರಕ್ಕೆ ಸಿಎಂ ಡಿಕೆಶಿ ಮನವಿ

ಹೊಸದಿಗಂತ ವರದಿ ಬೆಳಗಾವಿ:

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವಿನ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಬೇಕು. ರೈತರನ್ನು ವಿಶ್ವಾಸಕ್ಕೆ ಪಡೆದು, ಎಲ್ಲರೂ ಒಮ್ಮತದ ತೀರ್ಮಾನಕ್ಕೆ ಬರಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಸೋಮವಾರ ಬೆಳಗಾವಿಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೈತರು ಮತ್ತು ಕಾರ್ಖಾನೆಗಳ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ಕಾರ್ಖಾನೆಗಳಿಲ್ಲದೆ ರೈತರಿಗೆ, ರೈತರಿಲ್ಲದೆ ಕಾರ್ಖಾನೆಗಳಿಗೆ ಅಸ್ತಿತ್ವವಿಲ್ಲ. ಹೀಗಾಗಿ ಎರಡೂ ಕಡೆಯವರ ಹಿತಾಸಕ್ತಿ ಕಾಪಾಡುವುದು ಮುಖ್ಯ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರ ಬೇಡಿಕೆಗೆ ಸ್ಪಂದಿಸಿ, ಕಬ್ಬಿನ ಬೆಲೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಕಾರ್ಖಾನೆಗಳು ಹಣ ಪಾವತಿಸುವ ನಿರ್ಧಾರ ಕೈಗೊಂಡಿದ್ದವು. ಸುಮಾರು ಶೇ.80ರಷ್ಟು ಕಾರ್ಖಾನೆಗಳು ಇದನ್ನು ಪಾಲಿಸಿದ್ದು, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ರೈತರಲ್ಲಿ ಆಕ್ರೋಶ ಹೆಚ್ಚಾಗದಂತೆ ಕಾರ್ಖಾನೆ ಮಾಲೀಕರು ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಿಂದ ಸಕ್ಕರೆ ಬೆಲೆಯಲ್ಲಿ ನಿರೀಕ್ಷಿತ ಏರಿಕೆಯಾಗದ ಹಿನ್ನೆಲೆಯಲ್ಲಿ ರೈತರಿಗೆ ನಷ್ಟ ಉಂಟಾಗಿದೆ. ಪ್ರತಿ ಟನ್ ಕಬ್ಬಿಗೆ 6 ಸಾವಿರದವರೆಗೆ ಬೆಲೆ ನಿಗದಿಪಡಿಸಬೇಕೆಂಬುದು ರೈತರ ಬೇಡಿಕೆಯಾಗಿದೆ. ಈ ಸಮಸ್ಯೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಾಗೂ ಕಾರ್ಖಾನೆ ಮಾಲೀಕರು ಒಟ್ಟಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಇದನ್ನೂ ಓದಿ:

ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿಯೂ ಕಬ್ಬು ಬೆಳೆಗಾರರ ಸಮಸ್ಯೆಯಿದೆ. ಸಕ್ಕರೆ ಉತ್ಪಾದನೆ ಕುಸಿತ, ಎಥನಾಲ್ ಮತ್ತು ಮೊಲಾಸಿಸ್ಗೆ ಸಂಬಂಧಿಸಿದ ವಿಚಾರಗಳು ಸೇರಿದಂತೆ ಹಲವು ಅಂಶಗಳು ಸಮಸ್ಯೆಗೆ ಕಾರಣವಾಗಿವೆ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಈ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿರುವುದಾಗಿ ತಿಳಿಸಿದರು.

ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಬ್ಯಾಂಕ್ ಸಾಲ, ಹಣಕಾಸು, ಎಥನಾಲ್ ಉತ್ಪಾದನೆ ಮತ್ತು ವಿದ್ಯುತ್ ದರ ಸೇರಿದಂತೆ ಹಲವು ಸಮಸ್ಯೆಗಳಿವೆ. ರೈತರ ಅಹವಾಲು ಆಲಿಸಿದಂತೆ ಕಾರ್ಖಾನೆಗಳ ಸಮಸ್ಯೆಗಳನ್ನೂ ಆಲಿಸಬೇಕಿದೆ. ಸಭೆಯಲ್ಲಿ ಆರೋಪ-ಪ್ರತ್ಯಾರೋಪಗಳಿಗೆ ಅವಕಾಶವಿಲ್ಲ. ರಾಜಕೀಯ ಬದಿಗಿಟ್ಟು ಪರಸ್ಪರ ವಿಶ್ವಾಸದಿಂದ ಪರಿಹಾರ ಕಂಡುಕೊಳ್ಳಬೇಕು ಎಂದರು.

ರೈತರ ಪ್ರತಿಭಟನೆ ವೇಳೆ ಕಿತ್ತೂರಿನಲ್ಲಿ ಅವರ ಅಹವಾಲು ಆಲಿಸಲಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ಕಳೆದ ವರ್ಷ ನಡೆದ ವಾಹನಕ್ಕೆ ಬೆಂಕಿ ಹಚ್ಚಿದಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದರು.

ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ವಾರ್ಷಿಕವಾಗಿ 20 ಸಾವಿರ ಕೋಟಿ ವೆಚ್ಚ ಮಾಡುತ್ತಿದ್ದು, ಈ ವರ್ಷ ಸುಮಾರು 32 ಸಾವಿರ ಕೋಟಿ ವೆಚ್ಚವಾಗುವ ಪರಿಸ್ಥಿತಿಯಿದೆ. ಮಳೆ ಕೊರತೆ, ವಿದ್ಯುತ್ ಬಳಕೆ ಹೆಚ್ಚಳ ಹಾಗೂ ಕಬ್ಬಿನ ಇಳುವರಿ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆ ಮಾಲೀಕರು ತಮ್ಮ ಸಲಹೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು. ರೈತರ ಬದುಕು ಮತ್ತು ಕಾರ್ಖಾನೆಗಳ ಭವಿಷ್ಯ ಕಾಪಾಡುವ ನಿರ್ಧಾರಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Must Read

Skip to toolbar