October 26, 2026
Monday, October 26, 2026
spot_img

ಸುವರ್ಣ ವಿಧಾನಸೌಧದಲ್ಲೇ ರೈತರ ರಂಪಾಟ: ಕಬ್ಬಿನ ಬೆಲೆ ವಿಚಾರಕ್ಕೆ ಕೈಕೈ ಮಿಲಾಯಿಸಿದ ಎರಡು ಬಣಗಳು

ಹೊಸದಿಗಂತ ವರದಿ ಬೆಳಗಾವಿ:

ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆ ಆರಂಭಕ್ಕೂ ಮುನ್ನವೇ ರೈತರ ಎರಡು ಬಣಗಳ ನಡುವೆ ಹೊಡೆದಾಟ ನಡೆದ ಘಟನೆ ನಗರದ ಸುವರ್ಣ ವಿಧಾನಸೌಧದಲ್ಲಿ ನಡೆದಿದೆ.

ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಚೂನಪ್ಪ ಪೂಜಾರಿ ಬಣಗಳ ರೈತರ ನಡುವೆ ಮೊದಲು ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಸಭಾಂಗಣದಲ್ಲಿ ಕುಡಿಯುವ ನೀರು ಮತ್ತು ಚಹಾ ವ್ಯವಸ್ಥೆ ಮಾಡದಿರುವುದೇ ಗಲಾಟೆಗೆ ಆರಂಭಿಕ ಕಾರಣವಾಗಿತ್ತು. ನಂತರ ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಎರಡೂ ಬಣಗಳ ನಡುವೆ ವಾಗ್ವಾದ ತೀವ್ರಗೊಂಡಿತು.

ಕಬ್ಬಿನ ಬೆಲೆ ವಿಚಾರಕ್ಕೆ ಸಂಘರ್ಷ:

ರೈತರನ್ನು ಸಮಾಧಾನಪಡಿಸಿದ ಚೂನಪ್ಪ ಪೂಜಾರಿ, ಈ ವರ್ಷ ಪ್ರತಿ ಟನ್ ಕಬ್ಬಿಗೆ 4,500 ಬೆಲೆ ಪಡೆಯುವುದಾಗಿ ಹೇಳಿದಾಗ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಹೊರಗಡೆ 5,500 ಬೆಲೆ ಕೇಳುವವರು ಸಭೆಯೊಳಗೆ 4,500ಕ್ಕೆ ಒಪ್ಪಿಕೊಳ್ಳುವ ಮಾತುಗಳನ್ನಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಇದರಿಂದ ಗಲಾಟೆ ಮತ್ತಷ್ಟು ಹೆಚ್ಚಾಯಿತು.

ಇದನ್ನೂ ಓದಿ:

ಈ ವೇಳೆ ರೈತರು ಪರಸ್ಪರ ಕೈಕೈ ಮಿಲಾಯಿಸಿದ್ದು, ಮೇಜಿನ ಮೇಲಿದ್ದ ಗಾಜಿನ ಲೋಟಗಳನ್ನು ಎಸೆದು ಹೊಡೆದಾಡಿದರು. ಘಟನೆಯಿಂದ ಸಭಾಂಗಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮಧ್ಯಪ್ರವೇಶಿಸಿ, ಗಲಾಟೆಯಲ್ಲಿ ತೊಡಗಿದ್ದ ಇಬ್ಬರು ರೈತರನ್ನು ವಶಕ್ಕೆ ಪಡೆದರು. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದು ಮತ್ತೆ ಕಬ್ಬು ಬೆಳೆಗಾರರ ಸಭೆ ಪ್ರಾರಂಭಿಸಿದರು.

Must Read