October 26, 2026
Monday, October 26, 2026
spot_img

ನಕಲಿ ಮತದಾನದ ಆರೋಪಕ್ಕೆ ಹಾವೇರಿಯಲ್ಲಿ ಬಿಜೆಪಿ ಆಕ್ರೋಶ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ, ಸಚಿವರ ರಾಜೀನಾಮೆಗೆ ಪಟ್ಟು

ಹೊಸದಿಗಂತ ವರದಿ ಹಾವೇರಿ:

ಪಶ್ಚಿಮ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಹಾವೇರಿಯ ಮತಗಟ್ಟೆ ಸಂಖ್ಯೆ 85ರಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು.

ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಅರ್ಧದಲ್ಲೇ ತಡೆದರು. ಇದರಿಂದ ದೇವಗಿರಿ ರಸ್ತೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ ನಡೆಯಿತು.

ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಪಾದಯಾತ್ರೆ ನಡೆಸಿದ ಬಿಜೆಪಿ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಯತ್ನಿಸಿದರು. ಈ ವೇಳೆ ಕಚೇರಿ ಎದುರು ಗದ್ದಲ ಉಂಟಾಯಿತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಸಚಿವರು ರಾಜೀನಾಮೆ ನೀಡಲಿ:

ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಮತದಾನ ಅಕ್ರಮದ ಆರೋಪದ ಕುರಿತು ಕಾಂಗ್ರೆಸ್ ನಾಯಕರು ನಾಚಿಕೆಪಡಬೇಕು. ಪ್ರಕರಣದಲ್ಲಿ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.

“ಅಧಿಕಾರಿಗಳು ಮತ್ತು ಪೊಲೀಸರು ಯಾರದೋ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಮತಗಳ್ಳತನ ಕಾಂಗ್ರೆಸ್‌ನ ಕಾಯಂ ಕೆಲಸವಾಗಿದೆ. ಸಚಿವರೇ ಮಹಿಳೆಯನ್ನು ಕರೆದುಕೊಂಡು ಹೋಗಿ ಮತ ಹಾಕಿಸಿದ್ದಾರೆ ಎಂಬ ಆರೋಪವಿದೆ. ಮಹಿಳೆಯನ್ನು ಬಳಸಿಕೊಂಡು ಮತದಾನ ಅಕ್ರಮ ಎಸಗಿರುವುದು ನಾಚಿಕೆಗೇಡಿನ ಸಂಗತಿ. ಸಚಿವರು ತಕ್ಷಣ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

ಇದನ್ನೂ ಓದಿ:

ಬಿಜೆಪಿ ಮುಖಂಡೆ ಶೋಭಾ ನಿಸ್ಸೀಮಗೌಡ ಮಾತನಾಡಿ, “ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಪತ್ನಿಯ ಹೆಸರಿನಲ್ಲಿಯೇ ಮತದಾನ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಬಲಿಪಶು ಮಾಡಲಾಗಿದೆ. ಅವರ ಕುಟುಂಬದ ಪರಿಸ್ಥಿತಿ ಏನಾಗಬೇಕು? ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸುವ ಬದಲು ಇಂತಹ ಕೃತ್ಯಗಳಿಗೆ ಅವಕಾಶ ನೀಡಿರುವುದು ಖಂಡನೀಯ. ಮಹಿಳೆಯನ್ನು ಬಳಸಿಕೊಂಡು ಮತಗಳ್ಳತನ ಮಾಡಿಸಿರುವ ಆರೋಪದ ಕುರಿತು ತನಿಖೆಯಾಗಬೇಕು. ಸಚಿವರು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮತದಾನ ಅಕ್ರಮದ ಮೂಲಕ ಅಧಿಕಾರ ಹಿಡಿಯುತ್ತ ಬಂದಿದೆ ಎಂದು ಆರೋಪಿಸಿದರು. ಇತ್ತೀಚಿನ ದಿನಗಳಲ್ಲಿ ವಿವಿಧ ಕಡೆ ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಎಸ್‌ಐಆರ್‌ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಗವಿಸಿದ್ದಪ್ಪ ದ್ಯಾಮಣ್ಣನವರ, ನಂಜುಂಡೇಶ ಕಳ್ಳೇರ, ಕಿರಣ ಕೊಳ್ಳಿ, ಸಂತೋಷ ಆಲದಕಟ್ಟಿ, ನಿರಂಜನ ಹೇರೂರ, ಚೆನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ, ರಾಜು ಹೊಸಕೇರಿ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

Must Read

Skip to toolbar