October 27, 2026
Tuesday, October 27, 2026
spot_img

ಮೈಸೂರು ದಸರಾ ವಿವಾದ: ‘ನಮ್ಮದು ಪ್ರಜಾಪ್ರಭುತ್ವ, ಇದು ಸರ್ಕಾರದ ದಸರಾ’ ಎಂದ ಸಿಎಂ ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಮುಕ್ತಾಯಗೊಂಡ ಬೆನ್ನಲ್ಲೇ ರಾಜಮನೆತನ ಮತ್ತು ಸರ್ಕಾರದ ನಡುವೆ ಹೊಸ ವಿವಾದವೊಂದು ಮುನ್ನೆಲೆಗೆ ಬಂದಿದೆ. ದಸರಾ ಮಹೋತ್ಸವದ ವೇಳೆ ನಡೆದ ಭದ್ರತಾ ಲೋಪ ಮತ್ತು ಸಂಪ್ರದಾಯಗಳಿಗೆ ಧಕ್ಕೆ ತಂದಿರುವ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಬರೆದಿದ್ದ ಪತ್ರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಬೆಳಗಾವಿಯಲ್ಲಿ ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. “ದೇಶದಲ್ಲಿ ಈಗ ಪ್ರಜಾಪ್ರಭುತ್ವವಿದೆ, ಇದು ಸರ್ಕಾರದ ಕಾರ್ಯಕ್ರಮವೇ ಹೊರತು ಯಾರ ವೈಯಕ್ತಿಕ ಹಬ್ಬವಲ್ಲ” ಎಂದು ಅವರು ಹೇಳಿದ್ದಾರೆ.

ರಾಜಮಾತೆ ಪತ್ರದಲ್ಲೇನಿತ್ತು?

2026ರ ಮೈಸೂರು ದಸರಾ ಆಚರಣೆಯ ಸಂದರ್ಭದಲ್ಲಿ ಜಂಬೂಸವಾರಿಯ ವೇಳೆ ಉಂಟಾದ ಭದ್ರತಾ ಲೋಪಗಳು, ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಅರಮನೆಯ ಸಾಂಪ್ರದಾಯಿಕ ವಿಧಿವಿಧಾನಗಳಿಗೆ ಅಡಚಣೆ ಉಂಟುಮಾಡಿದ ಘಟನೆಗಳ ಕುರಿತು ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ಸುದೀರ್ಘ ಪತ್ರ ಬರೆದು ತೀವ್ರ ಅಸಮಾಧಾನ ಹೊರಹಾಕಿದ್ದರು.

ಡಿಕೆಶಿ ಖಡಕ್‌ ಉತ್ತರ

“ದಸರಾ ಹಬ್ಬ ನನ್ನ ವೈಯಕ್ತಿಕ ವಿಚಾರವೂ ಅಲ್ಲ, ಪ್ರಮೋದಾದೇವಿ ಅವರ ವೈಯಕ್ತಿಕ ವಿಚಾರವೂ ಅಲ್ಲ. ಇದು ಇಡೀ ನಾಡಿನ ಹಬ್ಬ. ಇದು ಸರ್ಕಾರದ ಕಾರ್ಯಕ್ರಮವೇ ಹೊರತು ಡಿಕೆಶಿ ಕಾರ್ಯಕ್ರಮವಲ್ಲ” ಎಂದು ಸ್ಪಷ್ಟಪಡಿಸಿದರು. “ನಾನು ಅವರ ಪತ್ರವನ್ನು ಇನ್ನು ಪೂರ್ಣವಾಗಿ ನೋಡಿಲ್ಲ. ಆದರೆ ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪರಂಪರೆಯಂತೆ ರಾಜಮನೆತನಕ್ಕೆ ನೀಡಬೇಕಾದ ಗೌರವವನ್ನು ನಮ್ಮ ಸರ್ಕಾರ ನೀಡಿದೆ. ಅವರು ಪತ್ರದಲ್ಲಿ ಏನು ಬರೆದಿದ್ದಾರೆ ಎಂಬುದನ್ನು ಗಮನಿಸಿ ಚರ್ಚೆ ಮಾಡುತ್ತೇನೆ” ಎಂದರು.

ಇದನ್ನೂ ಓದಿ:

“ನನಗೆ ದೊಡ್ಡ ಇತಿಹಾಸ ಗೊತ್ತಿಲ್ಲ, ಹಿಂದಿನ ಪದ್ಧತಿಯಂತೆಯೇ ಹೊಸ ಆನೆ ಪ್ರಶಾಂತ್ ಮೇಲೆ ಅಂಬಾರಿ ಇರಿಸಿ ದಸರಾ ನಡೆಸಿದ್ದೇವೆ. ಈಗ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ, ಪ್ರಜಾಪ್ರಭುತ್ವ ಇಲ್ಲದಿದ್ದರೆ ರಾಜರ ಕಾಲದ ಪದ್ಧತಿ ನಡೆಯುತ್ತಿತ್ತೇನೋ, ಆದರೆ ಈಗ ಅದೆಲ್ಲಾ ಆಗಲ್ಲ” ಎಂದು ತಿಳಿಸಿದ್ದಾರೆ.

ಕೊನೆಯದಾಗಿ ಮಾತನಾಡಿದ ಅವರು, ದಸರಾ ಮಹೋತ್ಸವವನ್ನು ಒಬ್ಬರೇ ನಿಂತು ಮಾಡಲು ಸಾಧ್ಯವಿಲ್ಲ, ಹಲವು ಸಚಿವರಿಗೆ ಜವಾಬ್ದಾರಿ ಹಂಚಿ ಯಶಸ್ವಿಯಾಗಿ ಮಾಡಲಾಗಿದೆ. ಒಂದು ವೇಳೆ ನಮ್ಮ ಕಡೆಯಿಂದ ಏನಾದರೂ ತಪ್ಪಾಗಿದ್ದರೆ ಅದನ್ನು ಖಂಡಿತವಾಗಿ ತಿದ್ದುಕೊಳ್ಳುತ್ತೇವೆ ಎಂದಿದ್ದಾರೆ.

Must Read

Skip to toolbar