October 27, 2026
Tuesday, October 27, 2026
spot_img

3,500 ಪೊಲೀಸರ ಕಾವಲು, 200ಕ್ಕೂ ಹೆಚ್ಚು ಸಿಸಿಟಿವಿ ಕಣ್ಗಾವಲು: ಇಂಡಿಯಾ ಮೈತ್ರಿಕೂಟದ ರ‍್ಯಾಲಿಗೆ ಹತ್ತು ಹಲವು ಷರತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿರುವ ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟದ ನವೆಂಬರ್ 1ರ ರ‍್ಯಾಲಿಗೆ ಅನುಮತಿ ರದ್ದುಪಡಿಸಿಲ್ಲ ಎಂದು ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪಗಳ ನಡುವೆಯೇ ಪೊಲೀಸರು ಈ ಹೇಳಿಕೆ ನೀಡಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ನೀಡಲಾಗಿದೆ. ಆದರೆ, ಭೂಮಿಯ ಮಾಲೀಕತ್ವ ಹೊಂದಿರುವ ಪ್ರಾಧಿಕಾರದ ಅನುಮತಿ ಸೇರಿದಂತೆ ನಿಗದಿಪಡಿಸಿದ ಷರತ್ತುಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

3,500 ಸಿಬ್ಬಂದಿ ನಿಯೋಜನೆ, 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ

ರ‍್ಯಾಲಿಯ ಭದ್ರತೆಗಾಗಿ ಸುಮಾರು 3,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲು ಯೋಜಿಸಲಾಗಿದೆ. ಪ್ರತಿಭಟನಾ ಸ್ಥಳದಲ್ಲಿ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ವಹಿಸಲಾಗುತ್ತದೆ. ಜನಸಂದಣಿ ನಿಯಂತ್ರಣ ಮತ್ತು ಭದ್ರತಾ ವ್ಯವಸ್ಥೆಗಾಗಿ ಮೈದಾನವನ್ನು 14 ವಲಯಗಳಾಗಿ ವಿಂಗಡಿಸಲಾಗಿದೆ. ಮೀಸಲು ಪಡೆಗಳ 10 ಕಂಪನಿಗಳನ್ನೂ ಸಿದ್ಧವಾಗಿಡಲು ಕ್ರಮ ಕೈಗೊಳ್ಳಲಾಗಿದೆ.

ಪ್ರತಿ ವಲಯದ ಭದ್ರತೆಯನ್ನು ಸಹಾಯಕ ಪೊಲೀಸ್ ಆಯುಕ್ತರ ದರ್ಜೆಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದು, ಎರಡು ವಲಯಗಳಿಗೆ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರ ದರ್ಜೆಯ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. ಸಿಸಿಟಿವಿ ಜೊತೆಗೆ ದೇಹಕ್ಕೆ ಅಳವಡಿಸುವ ಕ್ಯಾಮೆರಾಗಳು ಮತ್ತು ಕಣ್ಗಾವಲು ವಾಹನಗಳನ್ನೂ ಬಳಸಲಾಗುತ್ತದೆ.

ಇದನ್ನೂ ಓದಿ:

ರ‍್ಯಾಲಿಗೆ ಹಲವು ಷರತ್ತುಗಳು

ಅಕ್ಟೋಬರ್ 17ರಂದು ಕಾಂಗ್ರೆಸ್ ನಾಯಕ ಮನೀಶ್ ಛತ್ರತ್ ಅವರಿಗೆ ಕಳುಹಿಸಲಾದ ಪತ್ರದ ಪ್ರಕಾರ, ನವೆಂಬರ್ 1ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ರ‍್ಯಾಲಿ ನಡೆಸಲು ಸಂಬಂಧಿಸಿದ ಅನುಮತಿ ಪ್ರಕ್ರಿಯೆಗೆ ಷರತ್ತುಗಳನ್ನು ವಿಧಿಸಲಾಗಿದೆ. ಕುಡಿಯುವ ನೀರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಸ್ವಯಂಸೇವಕರ ನಿಯೋಜನೆ ಮತ್ತು ವಾಹನಗಳ ನಿಗದಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಪ್ರಚೋದನಕಾರಿ ಭಾಷಣ ಹಾಗೂ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ವರ್ತನೆಗಳಿಗೆ ಅವಕಾಶ ನೀಡಬಾರದು. ಕಾರ್ಯಕ್ರಮ ಸಂಜೆ 5ರೊಳಗೆ ಮುಗಿಸಿ, ಜನರು ಸ್ಥಳದಿಂದ ನಿರ್ಗಮಿಸಬೇಕು ಎಂದು ಸೂಚಿಸಲಾಗಿದೆ.

ಎಸ್‌ಐಆರ್ ವಿವಾದದ ವಿರುದ್ಧ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅಕ್ರಮಗಳಾಗಿವೆ ಎಂದು ಆರೋಪಿಸಿ ವಿರೋಧ ಪಕ್ಷಗಳು ಈ ರ‍್ಯಾಲಿ ಆಯೋಜಿಸುತ್ತಿವೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಅವರ ರಾಜೀನಾಮೆಗೆ ಆಗ್ರಹಿಸಿವೆ.

Must Read