ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪೇನ್ನ ಟೊಲೆಡೊ ಪ್ರಾಂತ್ಯದಲ್ಲಿ ಬುಧವಾರ ಭೀಕರ ರೈಲು ದುರಂತವೊಂದು ಸಂಭವಿಸಿದೆ. ಎರಡು ಹೈಸ್ಪೀಡ್ ರೈಲುಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ. 179 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಡಿಕ್ಕಿಯ ಭೀಕರತೆಗೆ ರೈಲಿನ ಹಲವು ಬೋಗಿಗಳು ಹಳಿ ತಪ್ಪಿ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿವೆ.
ಒಂದೇ ಹಳಿಯಲ್ಲಿ ಎರಡು ರೈಲು
ರಾಜಧಾನಿ ಮ್ಯಾಡ್ರಿಡ್ ಮತ್ತು ಅಂಡಲೂಸಿಯಾವನ್ನು ಸಂಪರ್ಕಿಸುವ ಹೈಸ್ಪೀಡ್ ರೈಲು ಮಾರ್ಗದ ‘ಉರ್ಡಾ’ ಎಂಬಲ್ಲಿ ಬೆಳಿಗ್ಗೆ 9 ಗಂಟೆಗೆ ಈ ದುರಂತ ನಡೆದಿದೆ. ಹಳಿಯ ಮೇಲೆ ನಿಂತಿದ್ದ ‘ಇರಿಯೊ’ ಕಂಪನಿಯ ರೈಲಿಗೆ, ಹಿಂದಿನಿಂದ ವೇಗವಾಗಿ ಬಂದ 397 ಪ್ರಯಾಣಿಕರಿದ್ದ ‘ರೆನ್ಫೆ’ ರೈಲು ಜೋರಾಗಿ ಡಿಕ್ಕಿ ಹೊಡೆದಿದೆ. ನಿಂತಿದ್ದ ಇರಿಯೊ ರೈಲಿನಲ್ಲಿ ಒಂದು ಮಗು ಸೇರಿದಂತೆ 147 ಪ್ರಯಾಣಿಕರಿದ್ದರು. ಡಿಕ್ಕಿಯ ರಭಸಕ್ಕೆ ಇರಿಯೊ ರೈಲಿನ ಎರಡು ಬೋಗಿಗಳು ಹಳಿ ತಪ್ಪಿ ಕಂದಕಕ್ಕೆ ಬಿದ್ದಿವೆ.
ಕಂಟ್ರೋಲ್ ರೂಮ್ ಸಿಬ್ಬಂದಿಯ ಎಡವಟ್ಟು?
ಪ್ರಾಥಮಿಕ ವರದಿಗಳ ಪ್ರಕಾರ, ಈ ಭೀಕರ ಅಪಘಾತಕ್ಕೆ ಸಿಗ್ನಲಿಂಗ್ ನಿಯಂತ್ರಣ ಕೊಠಡಿಯ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಇರಬಹುದು ಎಂದು ಶಂಕಿಸಲಾಗಿದೆ.
ಬುಧವಾರ ಬೆಳಗ್ಗೆ ಮುಖ್ಯ ‘LZB’ ಸಿಗ್ನಲಿಂಗ್ ಮತ್ತು ಸುರಕ್ಷತಾ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಆ ಭಾಗದಲ್ಲಿ ಸುಮಾರು 8 ರೈಲುಗಳು ಸ್ಥಗಿತಗೊಂಡಿದ್ದವು. ರೈಲು ಸಂಚಾರವನ್ನು ಪರ್ಯಾಯ ವ್ಯವಸ್ಥೆಯಡಿ ನಿಯಂತ್ರಿಸಲಾಗುತ್ತಿತ್ತು. ಈ ವೇಳೆ ಮ್ಯಾಡ್ರಿಡ್ನ ಕಂಟ್ರೋಲ್ ರೂಮ್ ಆಪರೇಟರ್ ಒಬ್ಬರು, ಹಳಿಯ ಮೇಲೆ ಇರಿಯೊ ರೈಲು ಇನ್ನೂ ನಿಂತಿರುವುದನ್ನು ಗಮನಿಸದೇ, ಅದೇ ಹಳಿಯಲ್ಲಿ ಹಿಂದಿನಿಂದ ಬರುತ್ತಿದ್ದ ರೆನ್ಫೆ ರೈಲಿಗೆ ಮುಂದೆ ಹೋಗಲು ಅನುಮತಿ ನೀಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಈ ಭೀಕರ ಡಿಕ್ಕಿ ಸಂಭವಿಸಿದೆ. ಆದರೆ ಇರಿಯೊ ರೈಲು ಏಕೆ ಅಲ್ಲಿಂದ ಕದಲಲಿಲ್ಲ ಮತ್ತು ಆಪರೇಟರ್ ಏಕೆ ಗ್ರೀನ್ ಸಿಗ್ನಲ್ ನೀಡಿದರು ಎಂಬುದು ಇನ್ನೂ ತನಿಖೆಯಲ್ಲಿದೆ.
ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ಸಿವಿಲ್ ಗಾರ್ಡ್ಸ್, ತುರ್ತು ವೈದ್ಯಕೀಯ ತಂಡಗಳು ಮತ್ತು ಹೆಲಿಕಾಪ್ಟರ್ಗಳು ಸ್ಥಳಕ್ಕೆ ಧಾವಿಸಿವೆ. ಬೋಗಿಗಳಲ್ಲಿ ಸಿಲುಕಿದ್ದ ಎಲ್ಲಾ ಗಾಯಾಳು ಪ್ರಯಾಣಿಕರನ್ನು ರಕ್ಷಿಸಿ ಹೊರತೆಗೆಯಲಾಗಿದ್ದು, ತಕ್ಷಣವೇ ಟೊಲೆಡೊ ಹಾಗೂ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸದ್ಯ ರಕ್ಷಣಾ ತಂಡಗಳು ಮೃತದೇಹಗಳನ್ನು ಹೊರತೆಗೆಯುವ ಕೆಲಸ ಮಾಡುತ್ತಿವೆ. ಈ ಅಪಘಾತದ ಹಿನ್ನೆಲೆಯಲ್ಲಿ ಮ್ಯಾಡ್ರಿಡ್-ಅಂಡಲೂಸಿಯಾ ಮಾರ್ಗದ 100ಕ್ಕೂ ಹೆಚ್ಚು ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ರಾಜಕೀಯ ಪ್ರಚಾರ ಕಾರ್ಯಕ್ರಮಗಳು ರದ್ದು
ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಈ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ ಅವರು ಬುಧವಾರದ ತಮ್ಮ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಇತ್ತ ವಿರೋಧ ಪಕ್ಷವಾದ ‘ಪೀಪಲ್ಸ್ ಪಾರ್ಟಿ’ ಕೂಡ ತನ್ನ ಎಲ್ಲಾ ರಾಜಕೀಯ ಪ್ರಚಾರ ಕಾರ್ಯಕ್ರಮಗಳನ್ನು ತಕ್ಷಣವೇ ಸ್ಥಗಿತಗೊಳಿಸಿದೆ.
ಇದನ್ನೂ ಓದಿ;
ವಿಶೇಷವೆಂದರೆ, ಇದೇ ರೈಲು ಮಾರ್ಗದಲ್ಲಿ ಕೇವಲ 9 ತಿಂಗಳ ಹಿಂದೆಯಷ್ಟೇ ಮತ್ತೊಂದು ಹೈಸ್ಪೀಡ್ ರೈಲು ಅಪಘಾತ ಸಂಭವಿಸಿ 46 ಜನರು ಪ್ರಾಣ ಕಳೆದುಕೊಂಡಿದ್ದರು. ಈಗ ಮತ್ತೆ ಅಂತಹದ್ದೇ ದುರಂತ ಮರುಕಳಿಸಿರುವುದು ಅಲ್ಲಿನ ರೈಲ್ವೆ ಮೂಲಸೌಕರ್ಯ ಮತ್ತು ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.



