October 29, 2026
Thursday, October 29, 2026
spot_img

ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ವಿವಾದ: ಕುಮಾರಸ್ವಾಮಿ ವಿರುದ್ಧ  ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿದ್ದ ಆರೋಪಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಇಂದು ತಿರುಗೇಟು ನೀಡಿದ್ದಾರೆ. ಕುಮಾರಸ್ವಾಮಿ ಅವರ ಮಾತುಗಳಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಮತ್ತು ಅವರೊಬ್ಬರು ‘ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು’ ಆಡುವ ವ್ಯಕ್ತಿ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

“ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು”

ನಿನ್ನೆ ಏನು ಮಾತನಾಡಿದರು, ಇಂದು ಏನು ಮಾತನಾಡುತ್ತಿದ್ದಾರೆ ಮತ್ತು ನಾಳೆ ಏನು ಮಾತನಾಡುತ್ತಾರೆ ಎಂಬ ಬಗ್ಗೆ ಕುಮಾರಸ್ವಾಮಿ ಅವರಿಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಖರ್ಗೆ ಲೇವಡಿ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ವಿಷಯವನ್ನು ಇಟ್ಟುಕೊಂಡು ಕುಮಾರಸ್ವಾಮಿ ಅವರು ಒಮ್ಮೆ ಮುಖ್ಯಮಂತ್ರಿಗಳ ಕಡೆಗೆ, ಇನ್ನೊಮ್ಮೆ ಜಮೀರ್ ಅಹ್ಮದ್ ಕಡೆಗೆ, ಮತ್ತೊಮ್ಮೆ ಖರ್ಗೆ ಕುಟುಂಬದ ಕಡೆಗೆ ಬೆರಳು ತೋರುತ್ತಾ ತಮ್ಮ ಗುರಿಯನ್ನು ಬದಲಾಯಿಸುತ್ತಲೇ ಇರುತ್ತಾರೆ. “ಬೇರೆಯವರ ಮನೆಗೆ ಬೆಂಕಿ ಇಟ್ಟು ತಮ್ಮ ಅಡುಗೆ ಮಾಡಿಕೊಳ್ಳುವುದನ್ನು ‘ಮನೆಮುರುಕತನ’ ಎನ್ನುತ್ತಾರೆ. ನಿಮಗೆ ಆ ಪದದ ಅರ್ಥ ಚೆನ್ನಾಗಿ ಗೊತ್ತು” ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯಗೆ ಅವಮಾನ ಮಾಡಿದ್ದೇ ಕುಮಾರಸ್ವಾಮಿ

ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಸಿದ್ದರಾಮಯ್ಯ ಅವರಿಗೆ ಅತಿ ಹೆಚ್ಚು ಅವಮಾನ ಮಾಡಿದ್ದರೆ ಅದು ಕುಮಾರಸ್ವಾಮಿ ಮಾತ್ರ ಎಂದು ಖರ್ಗೆ ಪ್ರತಿಪಾದಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗದಂತೆ ತಡೆದಿದ್ದೇ ಇದೇ ಕುಮಾರಸ್ವಾಮಿ. ಅವರ ಇಡೀ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಅವರನ್ನು ಸದಾ ಕಾಡಿದ ಅವರು, ಈಗ ಖರ್ಗೆ ಕುಟುಂಬದತ್ತ ತಿರುಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಸ್ವಂತ ಅಣ್ಣನ ಕುಟುಂಬದ ಬೆಳವಣಿಗೆಯನ್ನೇ ಸಹಿಸದ ಕುಮಾರಸ್ವಾಮಿ ಅವರು ನಮ್ಮನ್ನು ಸಹಿಸಲು ಹೇಗೆ ಸಾಧ್ಯ ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಪ್ರಿಯಾಂಕ್ ಖರ್ಗೆ ಅವರ ನೇರ ಪ್ರಶ್ನೆಗಳು

ಕುಮಾರಸ್ವಾಮಿ ಅವರ ನೈತಿಕತೆಯನ್ನು ಪ್ರಶ್ನಿಸಿ ಸಚಿವರು ಕೆಲವು ನೇರ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ನಿಮ್ಮ ಐಟಿ ಸೆಲ್ ಹುಡುಗರು ತನಿಖೆಗೆ ಏಕೆ ಹಾಜರಾಗುತ್ತಿಲ್ಲ? ಈ ಸ್ಟಿಂಗ್ ವೀಡಿಯೋ ಬಹಿರಂಗಪಡಿಸುವಲ್ಲಿ ನಮ್ಮ ಜನರ ಪಾತ್ರವಿಲ್ಲ ಎಂದು ಧೈರ್ಯವಾಗಿ ಹೇಳುವ ನೈತಿಕತೆ ನಿಮಗೇಕೆ ಇಲ್ಲ? ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ಹೋಗಿ ಹೆಣೆದ ಪಿತೂರಿ ಏನು? ಇದರ ಬಗ್ಗೆ ಮಾತನಾಡುತ್ತೀರಾ ಕುಮಾರಣ್ಣ? ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

 ಕುಮಾರಸ್ವಾಮಿ ಮಾಡಿದ್ದ ಆರೋಪವೇನು?

ಇದಕ್ಕೂ ಮುನ್ನ ಬುಧವಾರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರಲು ಸ್ಟಿಂಗ್ ಆಪರೇಷನ್ ಹೆಸರಿನಲ್ಲಿ ಆಂತರಿಕ ಪಿತೂರಿ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಸ್ಥಾನ ತಪ್ಪಲು ಸಿದ್ದರಾಮಯ್ಯ ಅವರೇ ಕಾರಣ ಎಂಬ ಹಳೇ ದ್ವೇಷವನ್ನು ತೀರಿಸಿಕೊಳ್ಳಲು ಖರ್ಗೆ ಕುಟುಂಬ ಈ ತಂತ್ರ ಹೂಡಿದೆ ಎಂದು ಕುಮಾರಸ್ವಾಮಿ ಹೇಳಿದ್ದರು.

Must Read

Skip to toolbar