ಹೊಸದಿಗಂತ ವರದಿ ರಾಮನಗರ:
ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿ, ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ, ಈಗ ಬ್ಯಾಲೆಟ್ ಪೇಪರ್‌ನಲ್ಲೇ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಜಾಗೃತ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ವಿಧಾನ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರಗಳು ಸೇರಿ ನಾಲ್ಕು ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 4ಕ್ಕೆ 4 ಸ್ಥಾನಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿದೆ. ಇದು ಎರಡೂ ಪಕ್ಷಗಳ ಕಾರ್ಯಕರ್ತರ ಅವಿರತ ಶ್ರಮಕ್ಕೆ ಸಂದ ಜಯ. ಅದರಲ್ಲೂ ಎ.ಪಿ. ರಂಗನಾಥ್ ಅವರಿಗೆ ಶಿಕ್ಷಕ ಸಮುದಾಯ ಒಂದು ಅವಕಾಶ ಕೊಟ್ಟಿದೆ ಎಂದು ಹೇಳಿದರು.
19 ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಮುಖಭಂಗ
ಈ ಚುನಾವಣೆ ಕೇವಲ ನಾಲ್ಕು ಕ್ಷೇತ್ರಗಳಿಗೆ ಸೀಮಿತವಾಗಿರಲಿಲ್ಲ. ರಾಜ್ಯದ 19 ಜಿಲ್ಲೆಗಳನ್ನು ಒಳಗೊಂಡಿದ್ದು, ಮಿನಿ ವಿಧಾನಸಭಾ ಚುನಾವಣೆಯಂತೆಯೇ ಪ್ರತಿಷ್ಠೆಯ ಕಣವಾಗಿತ್ತು. ಸ್ವತಃ ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾಗೂ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕ್ಷೇತ್ರ ಕಲಬುರಗಿ ಸೇರಿದಂತೆ ಕಾಂಗ್ರೆಸ್ ಭದ್ರಕೋಟೆಗಳಲ್ಲೇ ಚುನಾವಣೆ ನಡೆದಿದ್ದು, ಅಲ್ಲೆಲ್ಲಾ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿದೆ ಎಂದರು.
ಆಡಳಿತಾರೂಢ ಕಾಂಗ್ರೆಸ್ ತನ್ನ ಸಂಪೂರ್ಣ ಸರ್ಕಾರಿ ಯಂತ್ರಾಂಗ, ಅಧಿಕಾರ ಬಲ ಮತ್ತು ಹಣ ಬಲವನ್ನು ಬಳಸಿದರೂ, ಪ್ರಬುದ್ಧ ಪದವೀಧರರು ಮತ್ತು ಶಿಕ್ಷಕರು ಎನ್‌ಡಿಎ ಪರವಾಗಿ ನಿಂತಿದ್ದಾರೆ. ಇದು 2028ರ ವಿಧಾನಸಭಾ ಚುನಾವಣೆಯ ಸ್ಪಷ್ಟ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಪತನದ ದಿನಗಳು ಸಮೀಪ
ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದಿದ್ದರೂ ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ. ಅಭಿವೃದ್ಧಿ ಕಡೆ ಫೋಕಸ್ ಮಾಡಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಬದಲಾವಣೆ ಜಗದ ನಿಯಮ. ಜನರು ಈಗ ಬದಲಾವಣೆ ಬಯಸಿದ್ದಾರೆ. ಮುಂದೆ ಕರ್ನಾಟಕ ಸೇರಿ ಮೂರು ರಾಜ್ಯಗಳ ಚುನಾವಣೆ ಹತ್ತಿರದಲ್ಲಿದೆ. ಕಾಂಗ್ರೆಸ್‌ಗೆ ಪತನದ ದಿನಗಳು ಹತ್ತಿರ ಬರುತ್ತಿವೆ ಎಂದು ಅವರು ವಿಶ್ಲೇಷಿಸಿದರು.
ಇದನ್ನೂ ಓದಿ:
ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮೈತ್ರಿ ಮುಂದುವರೆಯುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಹೈಕಮಾಂಡ್ ನಾಯಕರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ನಿರ್ಧಾರ ಮಾಡಬೇಕಾದ ವಿಚಾರ. ಸ್ಥಳೀಯ ಸಂಸ್ಥೆ ಚುನಾವಣೆಗೆ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ ಎಂದರು.



