ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂಭ್ರಮ ಹಾಗೂ ಕರ್ನಾಟಕ ರಾಜ್ಯೋತ್ಸವದ ಹೊತ್ತಿನಲ್ಲೇ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಶಾಕ್ ನೀಡಿದೆ. ಕರ್ನಾಟಕ ಹಾಲಿನ ಮಹಾಮಂಡಳಿ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 8 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ನವೆಂಬರ್ 1ರಿಂದಲೇ ಈ ಹೊಸ ದರ ಜಾರಿಗೆ ಬರಲಿದೆ ಎಂದು ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ.
46ರೂ. ಇದ್ದ ಹಾಲಿನ ಬೆಲೆ ಈಗ 54 ರೂ.
ರಾಜ್ಯ ಸಚಿವ ಸಂಪುಟದ ಅನುಮೋದನೆಯೊಂದಿಗೆ ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಿಸಲಾಗಿದೆ. ಈ ಹಿಂದೆ ಪ್ರತಿ ಲೀಟರ್ ಹಾಲಿಗೆ ಗ್ರಾಹಕರು 46 ರೂಪಾಯಿ ಪಾವತಿಸುತ್ತಿದ್ದರು, ಇನ್ಮುಂದೆ ಅದು 54 ರೂಪಾಯಿ ಆಗಲಿದೆ.
ಹೆಚ್ಚುವರಿ 8 ರೂ. ಹಣದ ಹಂಚಿಕೆ ಹೇಗೆ
ಸರ್ಕಾರದ ಪ್ರಕಟಣೆಯ ಪ್ರಕಾರ, ಗ್ರಾಹಕರಿಂದ ವಸೂಲಿ ಮಾಡುವ ಹೆಚ್ಚುವರಿ 8 ರೂಪಾಯಿಗಳಲ್ಲಿ ಸಿಂಹಪಾಲು ರೈತರಿಗೆ ತಲುಪಲಿದೆ. ಹೆಚ್ಚುವರಿ ದರದಲ್ಲಿ 7 ರೂಪಾಯಿಗಳನ್ನು ನೇರವಾಗಿ ಹಾಲು ಉತ್ಪಾದಕ ರೈತರಿಗೆ ನೀಡಲು ನಿರ್ಧರಿಸಲಾಗಿದೆ. ಇದರೊಂದಿಗೆ ರೈತರಿಗೆ ಲೀಟರ್‌ಗೆ ಸಿಗುತ್ತಿದ್ದ 35 ರೂ. ಆದಾಯವು ಇನ್ಮುಂದೆ 42 ರೂ.ಕ್ಕೆ ಏರಿಕೆಯಾಗಲಿದೆ. ಸರ್ಕಾರದ 5 ರೂ. ಪ್ರೋತ್ಸಾಹ ಧನವೂ ಮುಂದುವರಿಯಲಿದೆ. ಇನ್ನುಳಿದ 1 ರೂ. ಕೆಎಂಎಫ್ ಒಕ್ಕೂಟದ ನಿರ್ವಹಣೆಗೆ ಸೇರಲಿದೆ.
ಇದನ್ನೂ ಓದಿ:
ದರ ಏರಿಕೆಗೆ ಕಾರಣಗಳೇನು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಕೃಷ್ಣಭೈರೇಗೌಡ ಮತ್ತು ಲಕ್ಷ್ಮಣ್ ಸವದಿ ದರ ಏರಿಕೆಯ ಹಿಂದಿನ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ರಾಜ್ಯದಲ್ಲಿ ತಲೆದೋರಿರುವ ಬರಗಾಲದ ಹಿನ್ನೆಲೆಯಲ್ಲಿ ಹಾಲಿನ ಉತ್ಪಾದನೆಯಲ್ಲಿ ಬರೋಬ್ಬರಿ 10 ಲಕ್ಷ ಲೀಟರ್‌ಗಳಷ್ಟು ಭಾರೀ ಕುಸಿತ ಕಂಡಿದೆ. ಕರ್ನಾಟಕದಲ್ಲಿ ಹಾಲಿನ ದರ ಇರಬೇಕಾದದ್ದಕ್ಕಿಂತ ಕಡಿಮೆ ಇದ್ದಿದ್ದರಿಂದ, ಇಲ್ಲಿನ ಹಾಲನ್ನು ಹೊರ ರಾಜ್ಯಗಳಿಗೆ ಅಕ್ರಮವಾಗಿ ರವಾನಿಸಲಾಗುತ್ತಿತ್ತು. ಇದನ್ನು ತಡೆಯಲು ದರ ಹೆಚ್ಚಳ ಅಗತ್ಯವಾಗಿತ್ತು. ಹೈನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ರೈತರು ಸಂಕಷ್ಟದಲ್ಲಿದ್ದು, ದರವನ್ನು ಕನಿಷ್ಠ 10 ರೂಪಾಯಿ ಏರಿಸುವಂತೆ ಒಕ್ಕೂಟದ ಮೇಲೆ ತೀವ್ರ ಒತ್ತಡ ಹೇರಿದ್ದರು.



