ಹೊಸದಿಗಂತ ವರದಿ ಬೆಳಗಾವಿ:
ರಾಜ್ಯದ ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಬೃಹತ್ ರೈತ ಹೋರಾಟ ನಡೆಯುತ್ತಿದೆ.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಇತ್ತೀಚೆಗೆ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಮಧ್ಯರಾತ್ರಿಯವರೆಗೂ ಐದು ಸುತ್ತಿನ ಸಭೆ ನಡೆಸಿದ್ದರು. ರೈತರ ಬೇಡಿಕೆಗಳ ಕುರಿತು ಕೇಂದ್ರದ ತಂಡದೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ರೈತರ ಬೇಡಿಕೆಗಳಿಗೆ ನಿರೀಕ್ಷಿತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅ.31 ನಾಳೆ ಶನಿವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಪ್ಲಾಜಾ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸಂಘ ನಿರ್ಧರಿಸಿದೆ. ಹೋರಾಟದಲ್ಲಿ ಲಕ್ಷಾಂತರ ರೈತರು ಪಾಲ್ಗೊಳ್ಳುವಂತೆ ರಾಜ್ಯಾಧ್ಯಕ್ಷ ಚೂನ್ನಪ್ಪ ಪೂಜಾರಿ ಕರೆ ನೀಡಿದ್ದಾರೆ.
ಇದನ್ನೂ ಓದಿ:
ಆದರೆ, ರೈತರ ಟೋಲ್ ಬಂದ್ ಹೋರಾಟಕ್ಕೆ ಇದೀಗ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಮೂರು ಟೋಲ್ ಪ್ಲಾಜಾಗಳನ್ನು ಬಂದ್ ಮಾಡದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ. ಇದರಿಂದ ರೈತ ಸಂಘದ ಟೋಲ್ ಬಂದ್ ಹೋರಾಟಕ್ಕೆ ಆಡಳಿತಾತ್ಮಕ ಅಡ್ಡಿ ಎದುರಾಗಿದೆ.
ಒಂದೆಡೆ ರೈತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಹೋರಾಟಕ್ಕೆ ಸಜ್ಜಾಗಿದ್ದರೆ, ಮತ್ತೊಂದೆಡೆ ಜಿಲ್ಲಾಡಳಿತ ಟೋಲ್ ಬಂದ್ ಗೆ ನಿರ್ಬಂಧ ವಿಧಿಸಿದೆ. ಹೀಗಾಗಿ ಅ.31 ನಾಳೆ ರೈತರು ಹಾಗೂ ರೈತ ಮುಖಂಡರು ಯಾವ ರೀತಿಯ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ? ಜಿಲ್ಲಾಡಳಿತದ ಆದೇಶದ ನಡುವೆಯೂ ಹೋರಾಟ ಮುಂದುವರಿಸಲಿದ್ದಾರೆಯೇ? ಎಂಬ ಕುತೂಹಲ ಇದೀಗ ಎಲ್ಲರ ಗಮನ ಸೆಳೆದಿದೆ.



