ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಪಟಾಕಿ ಸಿಡಿಸುವುದಕ್ಕೆ ಕರ್ನಾಟಕ ಸರ್ಕಾರ ಸಮಯದ ಮಿತಿ ವಿಧಿಸಿದೆ. ನವೆಂಬರ್ 8ರಿಂದ 10ರವರೆಗೆ ನಡೆಯುವ ಮೂರು ದಿನಗಳ ಹಬ್ಬದ ಸಂದರ್ಭದಲ್ಲಿ ಪ್ರತಿದಿನ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ವಾಯು ಮತ್ತು ಶಬ್ದ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ಅನುಸಾರ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಎರಡು ಗಂಟೆಗಳ ಕಾಲಮಿತಿಗೆ ಕಟ್ಟುನಿಟ್ಟಿನ ಸೂಚನೆ
ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವ ರಾಮಲಿಂಗಾ ರೆಡ್ಡಿ ಈ ಸೂಚನೆಗಳನ್ನು ಪ್ರಕಟಿಸಿದ್ದಾರೆ. ಎಲ್ಲ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ನಿಗದಿತ ಸಮಯ ಹೊರತುಪಡಿಸಿ ಬೇರೆ ಅವಧಿಯಲ್ಲಿ ಪಟಾಕಿ ಸಿಡಿಸುವುದಕ್ಕೆ ಅವಕಾಶವಿರುವುದಿಲ್ಲ.
ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ
ಈ ಬಾರಿಯ ದೀಪಾವಳಿಯಲ್ಲಿ ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹಸಿರು ಪಟಾಕಿಗಳ ಪ್ಯಾಕೆಟ್ಗಳ ಮೇಲೆ ಅಧಿಕೃತ ಗುರುತು ಹಾಗೂ ಕ್ಯೂಆರ್ ಕೋಡ್ ಕಡ್ಡಾಯವಾಗಿರಲಿದೆ. ಜಿಲ್ಲಾ ಪರಿಸರ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದು, ನಿಗದಿತ ಗುರುತು ಇಲ್ಲದ ಪಟಾಕಿಗಳನ್ನು ಹಸಿರು ಪಟಾಕಿಗಳೆಂದು ಪರಿಗಣಿಸಲಾಗುವುದಿಲ್ಲ. ನಿಯಮ ಉಲ್ಲಂಘಿಸುವ ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಇದನ್ನೂ ಓದಿ:
ನಿಯಮ ಉಲ್ಲಂಘಿಸಿದರೆ ಗೋದಾಮು ಸೀಜ್
ಪ್ರತಿ ಜಿಲ್ಲೆಯಲ್ಲಿ ಅಗ್ನಿಶಾಮಕ, ಆರೋಗ್ಯ, ಪೊಲೀಸ್, ಕಂದಾಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲು ಸೂಚಿಸಲಾಗಿದೆ. ಪಟಾಕಿ ಗೋದಾಮುಗಳಲ್ಲಿ ಪರಿಶೀಲನೆ ನಡೆಸಿ, ನಿಷೇಧಿತ ಪಟಾಕಿಗಳು ಪತ್ತೆಯಾದರೆ ಗೋದಾಮು ಮುಚ್ಚಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಹೊರರಾಜ್ಯಗಳಿಂದ ಅಕ್ರಮವಾಗಿ ಸಾಗಿಸುವ ನಿಷೇಧಿತ ಪಟಾಕಿಗಳನ್ನೂ ವಶಪಡಿಸಿಕೊಳ್ಳಲು ಸೂಚಿಸಲಾಗಿದೆ.



