ಹೊಸದಿಗಂತ ವರದಿ ಕಾರವಾರ:
ಮೀನುಗಾರಿಕೆ ಬಂದರಿನಲ್ಲಿ ಬೋಟಿನಲ್ಲಿದ್ದ ಮೀನು ಖಾಲಿ ಮಾಡುವಾಗ ಮೀನಿನ ವಿಷಾನಿಲ ಹೊರಸೂಸಿ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ತಾಲೂಕಿನ ಮುದಗಾ ಮೀನುಗಾರಿಕೆ ಬಂದರಿನಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ್ದು ಒಂದೇ ವಾರದ ಅವಧಿಯಲ್ಲಿ ಜಿಲ್ಲೆಯ ಎರಡು ಕಡೆಗಳಲ್ಲಿ ಸಂಭವಿಸಿದ ದುರಂತದಲ್ಲಿ ಒಟ್ಟು 5 ಜನ ಕಾರ್ಮಿಕರು ಜೀವ ಕಳೆದುಕೊಂಡಂತಾಗಿದೆ.
ಕಾರವಾರ ಮತ್ತು ಅಂಕೋಲಾ ತಾಲೂಕುಗಳ ಗಡಿಯಲ್ಲಿ ಇರುವ ಮೀನುಗಾರಿಕೆ ಬಂದರಿನಲ್ಲಿ ಅಂಕೋಲಾ ತಾಲೂಕಿನ ಬೆಲೇಕೇರಿಯ ಮೂಕಾಂಬಿಕಾ ಬೋಟಿನ ಮಂಜುಗಡ್ಡೆ ಶೈತ್ಯಾಗಾರದಲ್ಲಿ ತುಂಬಿದ ಚಮನ್ ಜಾತಿಯ ಮೀನು ಖಾಲಿ ಮಾಡುವ ಸಂದರ್ಭದಲ್ಲಿ ಮೀನಿನ ವಿಷಾನಿಲದಿಂದ ನಾಲ್ಕು ಜನ ಕಾರ್ಮಿಕರು ಅಸ್ವಸ್ಥಗೊಂಡಿದ್ದು ಅವರನ್ನು ಕೂಡಲೇ ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರಲ್ಲಿ ಇಬ್ಬರು ಮೃತಪಟ್ಟಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ ಇನ್ನೋರ್ವ ಕಾರ್ಮಿಕ ಅಪಾಯದಿಂದ ಪಾರಾಗಿದ್ದಾನೆ.
ಎಲ್ಲರೂ ಓರಿಸ್ಸಾ ಮೂಲದ ಕಾರ್ಮಿಕರಾಗಿದ್ದು ಮೃತರನ್ನು ಓರಿಸ್ಸಾದ ಪುರಂದರ್(21) ಆಕಾಶ್(24) ಎಂದು ಗುರುತಿಸಲಾಗಿದೆ ಲಲಿಂದರ್ ದುರುವಾ(41)ಇವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಕೋಲಾ ತಾಲೂಕಿನ ಬೆಲೇಕೇರಿಯ ಸಚಿನ್ ಎನ್ನುವವರ ಮಾಲಿಕತ್ವದ ಮೂಕಾಂಬಿಕಾ ಬೋಟ್ ಮುದಗಾ ಬಂದರಿನಲ್ಲಿ ಮೀನು ಖಾಲಿ ಮಾಡುತ್ತಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ.
ಈ ವಾರದ ಆರಂಭದಲ್ಲಿ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಬೋಟಿನಲ್ಲಿದ್ದ ಮೀನು ಖಾಲಿ ಮಾಡುತ್ತಿದ್ದ ಸಂದರ್ಭದಲ್ಲಿ ವಿಷಾನಿಲದ ದುಷ್ಪರಿಣಾಮದಿಂದ ಕುಮಟಾ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮೀನುಗಾರಿಕೆ ಸಚಿವ ಬಸವಂತಪ್ಪ ಸ್ಥಳಕ್ಕೆ ಭೇಟಿ ನೀಡಿ ಘಟನೆಯ ತನಿಖೆಗೆ ಆದೇಶ ನೀಡಿದ್ದರಲ್ಲದೇ ಬೋಟುಗಳ ಮಾಲಿಕರು ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದರು.



