ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಮುಂಬರುವ ಸೀಸನ್ಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮಹತ್ವದ ಹಾಗೂ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ತಂಡವನ್ನು ಐದು ಬಾರಿ ಚಾಂಪಿಯನ್ ಮಾಡಿರುವ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುವುದು ಸದ್ಯ ಖಚಿತಗೊಂಡಿದೆ. ಕಳೆದ ಕೆಲವು ಸೀಸನ್ಗಳಲ್ಲಿ ತಂಡವು ಎದುರಿಸಿದ ತೀವ್ರ ಹಿನ್ನಡೆ ಮತ್ತು ಕಳಪೆ ಪ್ರದರ್ಶನದಿಂದ ಹೊರಬರಲು ಮ್ಯಾನೇಜ್ಮೆಂಟ್ ಈ ಮಾಸ್ಟರ್ ಪ್ಲಾನ್ ಮಾಡಿದೆ.
ವರದಿಗಳ ಪ್ರಕಾರ, ಭವಿಷ್ಯದ ದೃಷ್ಟಿಯಿಂದ ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುವಂತೆ ರೋಹಿತ್ ಶರ್ಮಾ ಮ್ಯಾನೇಜ್ಮೆಂಟ್ಗೆ ಸಲಹೆ ನೀಡಿದ್ದರು. ತಾವೊಬ್ಬ ಮಾರ್ಗದರ್ಶಕರಾಗಿ ಯುವ ಆಟಗಾರನ ಹಿಂದೆ ನಿಲ್ಲಲು ರೋಹಿತ್ ಬಯಸಿದ್ದರು. ಆದರೆ, ತಂಡದ ಪ್ರಸ್ತುತ ಬಿಕ್ಕಟ್ಟನ್ನು ನಿವಾರಿಸಲು ಅನುಭವಿ ನಾಯಕನ ಅವಶ್ಯಕತೆ ಇದೆ ಎಂದು ಬಲವಾಗಿ ನಂಬಿದ ಫ್ರಾಂಚೈಸಿ, ರೋಹಿತ್ ಅವರೇ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಬೇಕೆಂದು ವಿಶೇಷ ಮನವಿ ಮಾಡಿಕೊಂಡಿತು. ಅಂತಿಮವಾಗಿ ಈ ಪ್ರಸ್ತಾವನೆಗೆ ರೋಹಿತ್ ಹಸಿರು ನಿಶಾನೆ ತೋರಿದ್ದಾರೆ.
ತಂಡದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಿಂದ ಕೆಳಗಿಳಿಯಬೇಕಾಗಿ ಬಂದಿದೆ. ಮತ್ತೊಂದೆಡೆ, ಮುಂಬೈ ಫ್ರಾಂಚೈಸಿಯು ತನ್ನ ಕೋಚಿಂಗ್ ವಿಭಾಗವನ್ನು ಸಂಪೂರ್ಣವಾಗಿ ನವೀಕರಿಸಿದ್ದು, ಕೀರನ್ ಪೊಲಾರ್ಡ್, ರಾಬಿನ್ ಉತ್ತಪ್ಪ ಹಾಗೂ ಮಿಚೆಲ್ ಮೆಕ್ಲೆನಗನ್ ಅವರಂತಹ ಮಾಜಿ ದಿಗ್ಗಜರಿಗೆ ಪ್ರಮುಖ ಜವಾಬ್ದಾರಿಗಳನ್ನು ನೀಡಿದೆ.
ಈ ಹೊಸ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿರುವ ಮುಂಬೈ ಇಂಡಿಯನ್ಸ್ ತಂಡವು, ಹಳೆ ವೈಭವವನ್ನು ಮರುಕಳಿಸುವ ವಿಶ್ವಾಸದಲ್ಲಿದೆ. ಹಾರ್ದಿಕ್ ಪಾಂಡ್ಯ ಮುಂದಿನ ದಿನಗಳಲ್ಲಿ ಬೇರೆ ತಂಡಕ್ಕೆ ಟ್ರೇಡ್ ಆಗುತ್ತಾರಾ ಅಥವಾ ರೋಹಿತ್ ನಾಯಕತ್ವದಲ್ಲೇ ಆಡುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.



