ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣ್ಬೀರ್ ಕಪೂರ್, ರಾಕಿ ಭಾಯ್ ಯಶ್ ಹಾಗೂ ಸಾಯಿ ಪಲ್ಲವಿ ನಟನೆಯ ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾ ‘ರಾಮಾಯಣ’ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಉಳಿದಿವೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ದೃಶ್ಯ ಕಾವ್ಯವನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ಪ್ರಚಾರ ಕಾರ್ಯಗಳು ಭರದಿಂದ ಸಾಗಿವೆ. ಅಮೆರಿಕದಲ್ಲಿ ಆರಂಭದಲ್ಲಿ ಮುಂಗಡ ಬುಕಿಂಗ್ ಕೊಂಚ ನಿಧಾನವಾಗಿದ್ದರೂ, ನಿರ್ಮಾಪಕರ ಒಂದು ಜಾಣತನದ ಯೋಜನೆಯಿಂದಾಗಿ ಈಗ ಟಿಕೆಟ್ ಬುಕಿಂಗ್ನಲ್ಲಿ ಬೃಹತ್ ಏರಿಕೆ ಕಂಡುಬಂದಿದೆ.
ಸಿನಿಮಾದ ಪ್ರಚಾರಕ್ಕಾಗಿ ಲಾಸ್ ಏಂಜಲ್ಸ್ನ ಪ್ರಸಿದ್ಧ ಅಕಾಡೆಮಿ ಮ್ಯೂಸಿಯಮ್ನಲ್ಲಿ ವಿಶೇಷ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಈ ಪ್ರದರ್ಶನಕ್ಕೆ ಅಮೆರಿಕದ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ಗಳನ್ನು ಆಹ್ವಾನಿಸಲಾಗಿತ್ತು. ನಟರಾದ ರಣ್ಬೀರ್ ಕಪೂರ್, ಯಶ್ ಹಾಗೂ ಸಾಯಿ ಪಲ್ಲವಿ ಸೇರಿದಂತೆ ಹಲವು ತಂತ್ರಜ್ಞರು ಈ ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಿನಿಮಾ ವೀಕ್ಷಿಸಿದ ವಿದೇಶಿ ಪ್ರೇಕ್ಷಕರು ಹಾಗೂ ಕ್ರಿಯೇಟರ್ಗಳು ಸಿನಿಮಾದ ಅದ್ಭುತ ಗುಣಮಟ್ಟವನ್ನು ಕಂಡು ವಿಸ್ಮಯಗೊಂಡಿದ್ದಾರೆ. ಪ್ರಸಿದ್ಧ ‘ಲಾರ್ಡ್ ಆಫ್ ದಿ ರಿಂಗ್ಸ್’ ಸಿನಿಮಾದ ಹಂತದಲ್ಲಿದೆ ಎಂದು ಕೊಂಡಾಡಿದ್ದು, ಈ ಪ್ರದರ್ಶನದ ಬೆನ್ನಲ್ಲೇ ಅಮೆರಿಕದಲ್ಲಿ ಬುಕಿಂಗ್ ಬರೋಬ್ಬರಿ 27% ಹೆಚ್ಚಾಗಿದೆ.
ವಿಶೇಷ ಪ್ರದರ್ಶನದ ಜತೆಗೆ ನಿರ್ಮಾಪಕರು ಟಿಕೆಟ್ ದರದಲ್ಲೂ ಒಂದು ಜಾಣತನದ ನಿರ್ಧಾರ ತಳೆದಿದ್ದಾರೆ. ಬೃಹತ್ ಬಜೆಟ್ ಸಿನಿಮಾವಾಗಿದ್ದರೂ, ಅಮೆರಿಕದಲ್ಲಿ ಸಿನಿಮಾದ ಟಿಕೆಟ್ ದರವನ್ನು ಸಣ್ಣ ಬಜೆಟ್ ಚಿತ್ರಗಳಿಗಿಂತ ಕಡಿಮೆ ಇರಿಸಿದ್ದಾರೆ. ನಿನ್ನೆ ತಾನೇ ಬಿಡುಗಡೆಯಾದ ತೆಲುಗಿನ ‘ಆದರ್ಶ ಕುಟುಂಬಂ 47’ ಚಿತ್ರದ ಟಿಕೆಟ್ಗಿಂತಲೂ ‘ರಾಮಾಯಣ’ದ ಟಿಕೆಟ್ ದರ ಕಡಿಮೆಯಿದೆ. ಈ ಆಕರ್ಷಕ ಬೆಲೆಯಿಂದಾಗಿ ವಿದೇಶದಲ್ಲಿರುವ ಭಾರತೀಯರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ಬುಕ್ ಮಾಡುತ್ತಿದ್ದಾರೆ.
‘ರಾಮಾಯಣ’ ಎನ್ನುವುದು ಭಾರತದಿಂದ ಇಡೀ ಜಗತ್ತಿಗೆ ನೀಡುತ್ತಿರುವ ಕೊಡುಗೆ ಎಂದು ನಿರ್ಮಾಪಕ ನಮಿತ್ ಮಲ್ಹೋತ್ರಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಈ ಸಿನಿಮಾ ನವೆಂಬರ್ 5 ರಂದು ವಿಶ್ವದಾದ್ಯಂತ ವಿವಿಧ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆಯುವುದು ಖಚಿತ ಎನ್ನಲಾಗುತ್ತಿದೆ.



