October 31, 2026
Saturday, October 31, 2026
spot_img

ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಗುಪ್ತಾ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಆಕ್ಷನ್ ಮತ್ತು ಕ್ರೈಮ್ ಸಿನಿಮಾಗಳ ಮೂಲಕ ಹೊಸ ಅಲೆ ಸೃಷ್ಟಿಸಿದ್ದ ಪ್ರಸಿದ್ಧ ನಿರ್ದೇಶಕ ಸಂಜಯ್ ಗುಪ್ತಾ (59) ಅವರು ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ಸ್ನಾನದ ಗೃಹದಲ್ಲಿ ಆಕಸ್ಮಿಕವಾಗಿ ಜಾರಿ ಬಿದ್ದಿದ್ದರಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಅವರ ದಿಢೀರ್ ಸಾವು ಭಾರತೀಯ ಚಿತ್ರರಂಗಕ್ಕೆ ಹಾಗೂ ಅವರ ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ದುಃಖ ತಂದೊಡ್ಡಿದೆ.

ಸಂಜಯ್ ಗುಪ್ತಾ ಅವರು ಬಾಲಿವುಡ್‌ನಲ್ಲಿ ತಮ್ಮದೇ ಆದ ಆಕ್ಷನ್ ಶೈಲಿಯನ್ನು ಪರಿಚಯಿಸಿದವರು. ನಟ ಸಂಜಯ್ ದತ್ ಅವರೊಂದಿಗೆ ಇವರ ಜೋಡಿ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿತ್ತು.2002ರ ‘ಕಾಂಟೇ’, 2004ರ ‘ಮುಸಾಫಿರ್’, 2006ರ ‘ಜಿಂದಾ’ ಹಾಗೂ 2007ರ ಸೂಪರ್‌ಹಿಟ್ ‘ಶೂಟೌಟ್ ಎಟ್ ಲೋಖಂಡ್‌ವಾಲಾ’ ಚಿತ್ರಗಳು ಇವರ ಯಶಸ್ವಿ ಪಯಣಕ್ಕೆ ಸಾಕ್ಷಿ. ನಂತರ 2012ರಲ್ಲಿ ಬಂದ ‘ಶೂಟೌಟ್ ಎಟ್ ವಡಾಲ’ ನೈಜ ಘಟನೆ ಆಧಾರಿತ ಕ್ರೈಮ್ ಸಿನಿಮಾಗಳಿಗೆ ಹೊಸ ಮೆರುಗು ನೀಡಿತು.

ಬರೀ ಕ್ರೈಮ್ ಕಥೆಗಳಷ್ಟೇ ಅಲ್ಲದೆ, ಐಶ್ವರ್ಯಾ ರೈ ಅಭಿನಯದ ‘ಜಾಜ್ಬಾ’ (2015) ಮತ್ತು ಹೃತಿಕ್ ರೋಷನ್ ನಟನೆಯ ಬ್ಲಾಕ್‌ಬಸ್ಟರ್ ‘ಕಾಬಿಲ್’ (2017) ಮೂಲಕ ತಮ್ಮ ಸೃಜನಶೀಲತೆಯನ್ನು ಸಾಬೀತುಪಡಿಸಿದರು. 2024ರಲ್ಲಿ ಬಿಡುಗಡೆಯಾದ ‘ದಿ ಮಿರಾಂಡಾ ಬ್ರದರ್ಸ್’ ಹಾಗೂ ‘ವಿಸ್ಫೋಟ್’ ಇವರ ಇತ್ತೀಚಿನ ಯಶಸ್ವಿ ಚಿತ್ರಗಳಾಗಿದ್ದವು.

ಸಿನಿಮಾ ನಿರ್ದೇಶಕರಾಗುವ ಮುನ್ನ ಸಂಜಯ್ ಗುಪ್ತಾ ಅವರು ಪೋಸ್ಟ್ ಪ್ರೊಡಕ್ಷನ್ ವಿಭಾಗಗಳಲ್ಲಿ ಸಕ್ರಿಯವಾಗಿ ದುಡಿದಿದ್ದರು. ಪ್ರಸಿದ್ಧ ನಿರ್ದೇಶಕ ಪಂಕಜ್ ಪರಾಶರ್ ಅವರೊಂದಿಗೆ ‘ಕರಮ್‌ಚಂದ್’ ಧಾರಾವಾಹಿ ಹಾಗೂ ‘ಜಲ್ವಾ’ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದಿದ್ದರು. ಈ ತಾಂತ್ರಿಕ ಜ್ಞಾನವೇ ಅವರ ಸಿನಿಮಾಗಳ ಆಕ್ಷನ್ ದೃಶ್ಯಗಳು ಅದ್ಭುತವಾಗಿ ಮೂಡಿಬರಲು ಕಾರಣವಾಗಿತ್ತು.

ಬಾಲಿವುಡ್ ಆಕ್ಷನ್ ಲೋಕಕ್ಕೆ ಹೊಸ ಸ್ಪರ್ಶ ನೀಡಿದ್ದ ಸಂಜಯ್ ಗುಪ್ತಾ ಅವರ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ.

Must Read