October 31, 2026
Saturday, October 31, 2026
spot_img

ಸ್ಟ್ಯಾಚು ಆಫ್ ಯೂನಿಟಿಯಲ್ಲಿ ರಾಷ್ಟ್ರೀಯ ಏಕತಾ ದಿನದ ವೈಭವ: ಉಕ್ಕಿನ ಮನುಷ್ಯನಿಗೆ ಪ್ರಧಾನಿ ಮೋದಿ ನಮನ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತ್‌ನ ಏಕ್ತಾ ನಗರದಲ್ಲಿರುವ ವಿಶ್ವದ ಅತಿ ಎತ್ತರದ ‘ಸ್ಟ್ಯಾಚು ಆಫ್ ಯೂನಿಟಿ’ ಸ್ಮಾರಕದ ಬಳಿ ಪಟೇಲರ ಪಾದಗಳಿಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಿದ್ದಾರೆ.

ಈ ವಿಶೇಷ ಸಂದರ್ಭದಲ್ಲಿ ‘X’ ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ಸರ್ದಾರ್ ಪಟೇಲ್ ಅವರನ್ನು ಅಖಂಡ ಭಾರತದ ಶಿಲ್ಪಿ ಎಂದು ಕೊಂಡಾಡಿದ್ದಾರೆ.

“ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮಜಯಂತಿಯಂದು ಅವರಿಗೆ ನನ್ನ ಹೃತ್ಪೂರ್ವಕ ಪ್ರಣಾಮಗಳು. ಅವರು ಬಲಿಷ್ಠ, ಸಮೃದ್ಧ ಮತ್ತು ಸಮರ್ಥ ಭಾರತದ ಸೃಷ್ಟಿಗಾಗಿ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಭಾರತ ಮಾತೆಯ ಸೇವೆಗಾಗಿ ಅವರು ನೀಡಿದ ಬಲಿದಾನ ಮತ್ತು ದೇಶಭಕ್ತಿಯು ವಿಕಸಿತ ಹಾಗೂ ಸ್ವಾವಲಂಬಿ ಭಾರತವನ್ನು ನಿರ್ಮಿಸಲು ನಮಗೆಲ್ಲರಿಗೂ ಸದಾ ಸ್ಫೂರ್ತಿಯಾಗಿದೆ” ಎಂದು ಮೋದಿ ತಿಳಿಸಿದ್ದಾರೆ.

‘ರಾಷ್ಟ್ರದ ಹಿತಾಸಕ್ತಿಯೇ ಮೊದಲು’

ಮತ್ತೊಂದೆಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಸರ್ದಾರ್ ಪಟೇಲರನ್ನು ಸ್ಮರಿಸಿ ದೇಶದ ಜನತೆಗೆ ಏಕತಾ ದಿನದ ಶುಭಾಶಯ ಕೋರಿದ್ದಾರೆ. ಆಧುನಿಕ ಭಾರತದ ನಿರ್ಮಾಣದಲ್ಲಿ ಪಟೇಲರ ಪಾತ್ರವನ್ನು ಶ್ಲಾಘಿಸಿದ ಅವರು, ಭಾರತದ ಇತಿಹಾಸದಲ್ಲಿ ಅವರ ಕೊಡುಗೆಗಳನ್ನು ಈ ರೀತಿ ನೆನಪಿಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಸಿಕ್ಕಾಗ ಹರಿದು ಹಂಚಿಹೋಗಿದ್ದ ನೂರಾರು ರಾಜಪ್ರಭುತ್ವದ ಸಂಸ್ಥಾನಗಳನ್ನು ತಮ್ಮ ಅಪ್ರತಿಮ ಧೈರ್ಯ ಮತ್ತು ದೂರದೃಷ್ಟಿಯಿಂದ ಒಂದೇ ದಾರದಲ್ಲಿ ಪೋಣಿಸಿ, ಬಲಿಷ್ಠ ಭಾರತದ ತಳಹದಿ ಹಾಕಿದರು. ದೇಶದಲ್ಲಿ ‘ಆಲ್ ಇಂಟಿಯಾ ಸರ್ವಿಸಸ್’ ತಂದು ದೇಶದ ಇಡೀ ಆಡಳಿತಾತ್ಮಕ ಚೌಕಟ್ಟಿಗೆ ಗಟ್ಟಿ ಬೇಸ್ ನೀಡಿದರು.

ಇದನ್ನೂ ಓದಿ:

ಖೇಡಾ ಮತ್ತು ಬಾರ್ದೋಲಿ ಸತ್ಯಾಗ್ರಹಗಳ ಮೂಲಕ ರೈತರ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟವು ಸಾರ್ವಜನಿಕ ಸೇವೆ ಮತ್ತು ನಾಯಕತ್ವಕ್ಕೆ ಇಂದಿಗೂ ಒಂದು ಅಪ್ರತಿಮ ಮಾದರಿಯಾಗಿದೆ. ಯಾವಾಗಲೂ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಕ್ಕೇ ಮೊದಲ ಆದ್ಯತೆ ನೀಡುತ್ತಿದ್ದ ಸರ್ದಾರ್ ಸಾಹಬರ ತ್ಯಾಗ ಮತ್ತು ದೇಶಭಕ್ತಿಯು ಪ್ರತಿ ನಾಗರಿಕನಿಗೂ ‘ಏಕ ಭಾರತ, ಶ್ರೇಷ್ಠ ಭಾರತ’ ನಿರ್ಮಿಸಲು ನಿರಂತರವಾಗಿ ಪ್ರೇರಣೆ ನೀಡುತ್ತಿರುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.

Must Read

Skip to toolbar