ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಾಸ್ ಏಂಜಲೀಸ್ನಲ್ಲಿ ಅದ್ದೂರಿಯಾಗಿ ನಡೆದ ವರ್ಲ್ಡ್ ಪ್ರೀಮಿಯರ್ ಪ್ರದರ್ಶನದ ನಂತರ, ನಿತೇಶ್ ತಿವಾರಿ ನಿರ್ದೇಶನದ ಹಾಗೂ ರಣ್ಬೀರ್ ಕಪೂರ್ ಮತ್ತು ಯಶ್ ಅಭಿನಯದ ‘ರಾಮಾಯಣ’ ಸಿನಿಮಾದ ಮೊದಲ ಅಂತಾರಾಷ್ಟ್ರೀಯ ವಿಮರ್ಶೆಗಳು ಹೊರಬಿದ್ದಿವೆ. ಶುಕ್ರವಾರ ರಾತ್ರಿ ವಿಮರ್ಶೆಯ ಮೇಲಿದ್ದ ನಿರ್ಬಂಧ ತೆರವಾಗಿದ್ದು, ವಿದೇಶಿ ಮಾಧ್ಯಮಗಳು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿವೆ. ಒಟ್ಟಾರೆಯಾಗಿ, ಚಿತ್ರದ ಅದ್ದೂರಿ ದೃಶ್ಯ ವೈಭವ ಮತ್ತು ಮೇಕಿಂಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಸಿನಿಮಾದ ಸುದೀರ್ಘ ಅವಧಿ ಹಾಗೂ ಅತಿಯಾದ ಕಥಾಹಂದರದ ಬಗ್ಗೆ ವಿಮರ್ಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಐದು ಪ್ರಮುಖ ವಿಮರ್ಶಾ ಸಂಸ್ಥೆಗಳ ಪೈಕಿ ಎರಡು ಸಂಸ್ಥೆಗಳು ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿವೆ. ಚಿತ್ರದ ಅದ್ಭುತ ಗ್ರಾಫಿಕ್ಸ್, ಮೇಕಿಂಗ್ ಹಾಗೂ ದೃಶ್ಯ ವೈಭವಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಫಿದಾ ಆಗಿದ್ದಾರೆ. ‘ಎನ್ವೈಸಿ ಮೂವಿ ಗುರು’ ಸಂಸ್ಥೆಯ ಆವಿ ಆಫರ್, “ಚಿತ್ರದ ಕಾಸ್ಟ್ಯೂಮ್ ಡಿಸೈನ್ ಹಾಗೂ ಸಾಹಸ ಸನ್ನಿವೇಶಗಳು ಅತ್ಯದ್ಭುತವಾಗಿ ಮೂಡಿಬಂದಿವೆ” ಎಂದು ಬಣ್ಣಿಸಿದ್ದಾರೆ. ‘ಸ್ಕ್ರೀನ್ ರಾಂಟ್’ 7/10 ಅಂಕ ನೀಡಿ, ತಾಂತ್ರಿಕವಾಗಿ ಇದೊಂದು ಅಪರೂಪದ ಸಾಧನೆ ಎಂದಿದ್ದರೆ, ‘ಇಂಡಿವೇರ್’ ಸಂಸ್ಥೆಯು ಭವ್ಯ ಉತ್ಪಾದನಾ ಮೌಲ್ಯಕ್ಕಾಗಿ ಚಿತ್ರಕ್ಕೆ ‘B’ ಗ್ರೇಡ್ ನೀಡಿ ಗೌರವಿಸಿದೆ.
ದೃಶ್ಯ ವೈಭವಕ್ಕೆ ಮೆಚ್ಚುಗೆ ಸಿಕ್ಕಿದ್ದರೂ, ಚಿತ್ರದ ಕಥಾಹರಿವು ಮತ್ತು ಅವಧಿಯ ಬಗ್ಗೆ ವಿಮರ್ಶಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಗ್ಲಿಷ್ ಆವೃತ್ತಿಯು ಭಾರತೀಯ ಅವೃತ್ತಿಗಿಂತ ಅರ್ಧ ಗಂಟೆ ಚಿಕ್ಕದಾಗಿದ್ದರೂ, ಎರಡೂವರೆ ಗಂಟೆಯ ಅವಧಿ ಕಿರಿಕಿರಿ ಉಂಟುಮಾಡುತ್ತದೆ ಎನ್ನಲಾಗಿದೆ. ಎನ್ವೈಸಿ ಮೂವಿ ಗುರು ಈ ಚಿತ್ರವನ್ನು ಭಾವನಾತ್ಮಕವಾಗಿ ಶೂನ್ಯ ಹಾಗೂ ನೀರಸ ಅಭಿನಯದ ಸಿನಿಮಾ ಎಂದು ಅಭಿಪ್ರಾಯಪಟ್ಟಿದೆ. ‘ನೆಕ್ಸ್ಟ್ ಬೆಸ್ಟ್ ಪಿಕ್ಚರ್’ ಸಂಸ್ಥೆಯ ಜಿಯೋವಾನಿ ಲಾಗೋ, “ರಾಮಾಯಣದಂತಹ ದೊಡ್ಡ ಕಥೆಯನ್ನು ಚಿತ್ರವನ್ನಾಗಿ ಮಾಡುವ ಬದಲು ‘ಗೇಮ್ ಆಫ್ ಥ್ರೋನ್ಸ್’ ಮಾದರಿಯಲ್ಲಿ ವೆಬ್ ಸರಣಿ ಮಾಡಿದ್ದರೆ ಹೆಚ್ಚು ನ್ಯಾಯ ಒದಗಿಸಬಹುದಿತ್ತು” ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರಕ್ಕೆ ಅತ್ಯಂತ ಕಠಿಣ ವಿಮರ್ಶೆ ಬಂದಿದ್ದು ‘IGN’ ಸಂಸ್ಥೆಯ ಸಿದ್ಧಾರ್ಥ್ ಅಡ್ಲಾಖ ಅವರಿಂದ. 10ಕ್ಕೆ ಕೇವಲ 4 ಅಂಕ ನೀಡಿದ ಅವರು, “ಇದು ಮೊದಲ ಭಾಗ ಮಾತ್ರವಾಗಿದ್ದು, ಸಾಹಸ ಸನ್ನಿವೇಶಗಳು, ಕಣ್ಣಿಗೆ ಕಿರಿಕಿರಿ ಉಂಟುಮಾಡುವ ಸಿಜಿಐ ಮತ್ತು ನಕಲಿ ಎಐ ಲಿಪ್-ಸಿಂಕ್ಗಳಿಂದಾಗಿ ಈ ಮಹಾಕಾವ್ಯ ತೀವ್ರ ನಿರಾಶೆ ಮೂಡಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
ಮೊದಲ ಭಾಗದ ವಿಮರ್ಶೆಗಳು ಮಿಶ್ರವಾಗಿದ್ದರೂ, ಪ್ರೇಕ್ಷಕರ ಅಂತಿಮ ತೀರ್ಪು ಮತ್ತು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಈ ಬಿಗ್ ಬಜೆಟ್ ಸಿನಿಮಾ ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.



