ಹೊಸದಿಗಂತ ವರದಿ ದಾವಣಗೆರೆ:
ಕಾಂಗ್ರೆಸ್ಸಿನವರಿಗೆ ಮಾನ, ಮರ್ಯಾದೆ ಇದ್ದಿದ್ದರೆ ನ್ಯಾಯಾಲಯದಲ್ಲಿ ಪರಿಶಿಷ್ಟರಿಗೆ ಹೆಚ್ಚಳ ಮಾಡಿದ್ದ ಮೀಸಲಾತಿಯ ಬಗ್ಗೆ ಸರಿಯಾದ ವಾದ ಮಂಡಿಸಬೇಕಿತ್ತು. ಮೀಸಲಾತಿ ಹೆಚ್ಚಳ ಕಾಯ್ದೆ ರದ್ಧುಪಡಿಸಿದ ನ್ಯಾಯಾಲಯದ ಕ್ರಮಕ್ಕೆ ನರೇಂದ್ರ ಮೋದಿ ಮತ್ತು ಟೀಂ ಕಾರಣವೆಂದು ಯಾವನು ಹೇಳಿದ? ಇವರಿಗೆ ಮಾನ ಮರ್ಯಾದೆ ಇದೆಯಾ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ಸಿನ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು.
ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟಾರೆ ಮೀಸಲಾತಿ ಶೇ.56ಕ್ಕೆ ಹೆಚ್ಚಿಸುವ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಟೀಂ ಕಾರಣವೆನ್ನುವುದು ಎಷ್ಟು ಸರಿ? ನ್ಯಾಯಾಲಯದಲ್ಲಿ ಸೂಕ್ತ ವಾದ ಮಂಡನೆ ಮಾಡಬೇಕಾಗಿತ್ತು.
ಇದನ್ನೂ ಓದಿ:
ಸರ್ಕಾರದ ವಕೀಲರು ಸರಿಯಾಗಿ ಕೋರ್ಟ್ ಗೆ ಸಹ ಹಾಜರಾಗದೇ, ಮೂರು ವರ್ಷ ಸಮಯ ವ್ಯರ್ಥ ಮಾಡಿದ್ದಾರೆ. ಎಸ್ಸಿ, ಎಸ್ಟಿ, ಶೋಷಿತ ಸಮುದಾಯಗಳಿಗೆ ಅನ್ಯಾಯ ಮಾಡಿರುವ ಸರ್ಕಾರ ಕೇವಲ ಕಪಟ ನಾಟಕ, ಕಳ್ಳಾಟ ಮಾಡ್ಕೊಂಡು ಈಗ ಮೋದಿಯವರ ಕಡೆ ಬೊಟ್ಟು ಮಾಡುತ್ತಿದೆ ಎಂದು ದೂರಿದರು.
ಹಾಲಿನ ದರವನ್ನು 8 ರೂ. ಹೆಚ್ಚಿಸುವ ಮೂಲಕ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬಕ್ಕೆ ಕೊಡುಗೆ ನೀಡಿದೆ. ಹಾಲಿನ ದರದ ಜೊತೆಗೆ ಕೆಲವೇ ದಿನಗಳಲ್ಲಿ ಬಸ್ ಪ್ರಯಾಣ ದರವನ್ನೂ ಹೆಚ್ಚಿಸುವ ತೀರ್ಮಾನ ಕೈಗೊಂಡಿದ್ದಾರೆ. ಇದು ಸರ್ಕಾರ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬಕ್ಕೆ ನೀಡುತ್ತಿರುವ ಕೊಡುಗೆಯಾಗಿದೆ. ಮುಖ್ಯಮಂತ್ರಿಗಳಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಹೀಗೆ ಬೆಲೆ ಏರಿಸುವ ತೀರ್ಮಾನ ಮಾಡುತ್ತಿರಲಿಲ್ಲ. ಬರಗಾಲದ ಪರಿಸ್ಥಿತಿಯಲ್ಲಿ ಬರೆ ಎಳೆಯು ಸ್ಥಿತಿ ಏಕೆ ಬಂತು? ಎಂದು ಪ್ರಶ್ನಿಸಿದರು.



