ಹೊಸದಿಗಂತ ವರದಿ ಕಲಬುರಗಿ:
ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳಿಗೆ ಭಿನ್ನಕೋಮಿನ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಮನೆಯಿಂದ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಜೇವರ್ಗಿ ತಾಲೂಕಿನಲ್ಲಿ ಕೇಳಿಬಂದಿದೆ. ಈ ಸಂಬಂಧ ಇಸ್ಮಾಯಿಲ್ ಎಂಬಾತನ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ಬಾಲಕಿಗೆ ಪರಿಚಯವಾಗಿದ್ದ ಆರೋಪಿ, ನಂತರ ಆಕೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ. ಪ್ರೀತಿಸುವಂತೆ ಹಾಗೂ ಮದುವೆಯಾಗುವುದಾಗಿ ಒತ್ತಾಯಿಸುತ್ತಿದ್ದರೂ, ಬಾಲಕಿ ತನ್ನ ವಯಸ್ಸು ಇನ್ನೂ ಮದುವೆಗೆ ಸೂಕ್ತವಾಗಿಲ್ಲ ಎಂದು ಹೇಳಿ ಆತನಿಂದ ದೂರ ಉಳಿಯಲು ಪ್ರಯತ್ನಿಸಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೂ ಆರೋಪಿಯ ವರ್ತನೆ ಮುಂದುವರಿದಿದ್ದು, ಬಾಲಕಿ ಸಂಬಂಧಿಕರ ಮನೆಗೆ ತೆರಳಿದ ಸಂದರ್ಭಗಳಲ್ಲಿಯೂ ಆಕೆಯನ್ನು ಹಿಂಬಾಲಿಸಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಈ ವಿಷಯ ಕುಟುಂಬದವರಿಗೆ ತಿಳಿದು, ಹಿರಿಯರ ಸಮ್ಮುಖದಲ್ಲಿ ಆರೋಪಿಗೆ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿದುಬಂದಿದೆ.
ಇಷ್ಟಾದರೂ ವರ್ತನೆ ಬದಲಿಸದ ಆರೋಪಿ, ಅಕ್ಟೋಬರ್ 29ರಂದು ರಾತ್ರಿ ಮನೆಯವರು ಇಲ್ಲದ ಸಮಯದಲ್ಲಿ ಬಾಲಕಿಯನ್ನು ಕರೆದೊಯ್ದಿದ್ದಾನೆ. ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ:
ದೂರಿನ ಆಧಾರದ ಮೇಲೆ ಜೇವರ್ಗಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪದ ಕುರಿತು ತನಿಖೆ ಮುಂದುವರಿದಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.



