November 1, 2026
Sunday, November 1, 2026
spot_img

ಮುಂಬೈ ಅಂಗಳಕ್ಕೆ ಹಿಟ್​ಮ್ಯಾನ್ ಪುನರಾಗಮನ: ವಿಜಯ್ ಹಝಾರೆ ಟ್ರೋಫಿಯಲ್ಲಿ ರೋಹಿತ್ ಅಬ್ಬರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಅನುಭವಿ ಹಾಗೂ ದಿಗ್ಗಜ ದಾಂಡಿಗ ರೋಹಿತ್ ಶರ್ಮಾ ಮತ್ತೆ ದೇಶೀಯ ಕ್ರಿಕೆಟ್ ಅಂಗಳದಲ್ಲಿ ಬ್ಯಾಟ್ ಬೀಸಲು ಸಜ್ಜಾಗಿದ್ದಾರೆ. ಮುಂಬರುವ 2026–27ರ ಸಾಲಿನ ವಿಜಯ್ ಹಝಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಮುಂಬೈ ತಂಡದ ಪರ ಆಡಲು ತಮ್ಮ ಲಭ್ಯತೆಯನ್ನು ಅವರು ಮುಂಬೈ ಕ್ರಿಕೆಟ್ ಸಂಸ್ಥೆಗೆ ಅಧಿಕೃತವಾಗಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಈಗಾಗಲೇ ನಿವೃತ್ತಿ ಹೇಳಿರುವ ಹಿಟ್​ಮ್ಯಾನ್, ಸಿಕ್ಕಿರುವ ಬಿಡುವಿನ ಅವಧಿಯನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದಾರೆ.

ಭಾರತ ತಂಡವು ಡಿಸೆಂಬರ್ 13 ರಿಂದ 19 ರವರೆಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡಲಿದ್ದು, ರೋಹಿತ್ ಶರ್ಮಾ ಟಿ20 ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಈ ವೇಳೆಯಲ್ಲಿ ನಡೆಯುವ ವಿಜಯ್ ಹಝಾರೆ ಟ್ರೋಫಿಯ ಲೀಗ್ ಹಂತದ ಪಂದ್ಯಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಡಿಸೆಂಬರ್ 21 ರಂದು ಸರ್ವೀಸಸ್ ತಂಡದ ವಿರುದ್ಧ ನಡೆಯಲಿರುವ ಮುಂಬೈನ 4ನೇ ಲೀಗ್ ಪಂದ್ಯದ ಮೂಲಕ ರೋಹಿತ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಜನವರಿ 3 ರಿಂದ ಆರಂಭವಾಗಲಿರುವ ಝಿಂಬಾಬ್ವೆ ವಿರುದ್ಧದ ಸರಣಿಗೂ ಮುನ್ನ ಅವರು ಮುಂಬೈ ಪರ ಸುಮಾರು 3 ರಿಂದ 4 ಲೀಗ್ ಪಂದ್ಯಗಳನ್ನು ಆಡಿ ಸಿದ್ಧತೆ ನಡೆಸಲಿದ್ದಾರೆ.

ಕಳೆದ ಸೀಸನ್‌ನ ವಿಜಯ್ ಹಝಾರೆ ಟ್ರೋಫಿಯಲ್ಲಿ ಸಿಕ್ಕಿಂ ವಿರುದ್ಧ ಕೇವಲ 94 ಎಸೆತಗಳಲ್ಲಿ 155 ರನ್ ಸಿಡಿಸಿ ರಂಜಿಸಿದ್ದ ರೋಹಿತ್, ಈ ಬಾರಿಯೂ ಅದೇ ರೀತಿಯ ಅಬ್ಬರದ ಫಾರ್ಮ್ ಮುಂದುವರಿಸುವ ತವಕದಲ್ಲಿದ್ದಾರೆ. ರೋಹಿತ್ ಅವರ ಉಪಸ್ಥಿತಿಯು ಮುಂಬೈ ತಂಡಕ್ಕೆ ಆನೆ ಬಲ ತಂದಿದ್ದು, ತಂಡದ ಯುವ ಆಟಗಾರರ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿದೆ.

Must Read