ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಲಕ್ಷ್ಮಿ ಯೋಜನೆಯ ಹಣ ಸದ್ಯಕ್ಕೆ ಬರುವುದಿಲ್ಲ ಎಂಬ ಆತಂಕದಲ್ಲಿದ್ದ ರಾಜ್ಯದ ಲಕ್ಷಾಂತರ ಮಹಿಳೆಯರ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಸರ್ಕಾರದಿಂದ ದೀಪಾವಳಿ ಹಬ್ಬದ ಭರ್ಜರಿ ಉಡುಗೊರೆ ಸಿಕ್ಕಿದೆ. ಅರ್ಹ ಫಲಾನುಭವಿಗಳಿಗೆ ಮಾಸಿಕ ಧನಸಹಾಯದ ಮೂರು ಕಂತುಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಪ್ರತಿ ಮಹಿಳೆಯ ಖಾತೆಗೆ ಒಟ್ಟಿಗೆ 6,000 ರೂ. ಜಮೆಯಾಗಲಿದೆ.
ಒಂದೇ ಬಾರಿಗೆ 7,405 ರೂ. ಕೋಟಿ ಬಿಡುಗಡೆ
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ನೀಡಿರುವ ಮಾಹಿತಿ ಪ್ರಕಾರ, ಯೋಜನೆಯ 34, 35 ಮತ್ತು 36ನೇ ಕಂತಿನ ಹಣವನ್ನು ಒಟ್ಟಿಗೆ ರಿಲೀಸ್ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆದೇಶಿಸಿದ್ದಾರೆ.
34ನೇ ಕಂತು 2,500 ಕೋಟಿ ರೂ., 35ನೇ ಕಂತು 2,452.93 ಕೋಟಿ ರೂ.,36ನೇ ಕಂತು 2,452.93 ಕೋಟಿ ರೂ. ಒಟ್ಟಾರೆಯಾಗಿ 7,405.86 ಕೋಟಿ ರೂ. ಮೊತ್ತದ ಬೃಹತ್ ಅನುದಾನವನ್ನು ಒಮ್ಮೆಗೆ ಹಸ್ತಾಂತರಿಸಲಾಗುತ್ತಿದೆ. ಈ ಹಿಂದೆ ಯೋಜನೆ ಮರುಪರಿಶೀಲನೆ ಮಾಡುವುದಾಗಿ ಸರ್ಕಾರ ಹೇಳಿದ್ದರಿಂದ ಹಣ ಕೈಸೇರುವುದು ಅನುಮಾನ ಎನ್ನಲಾಗಿತ್ತು. ಆದರೆ ಈಗ ಮೂರು ಕಂತುಗಳು ಒಟ್ಟಿಗೆ ಬರುತ್ತಿರುವುದರಿಂದ ಹಬ್ಬದ ಸಂಭ್ರಮ ದುಪ್ಪಟ್ಟಾಗಿದೆ.
ಬಜೆಟ್ ಕೊರತೆ ನಡುವೆಯೂ ಮಹತ್ವದ ನಿರ್ಧಾರ
ಇದಕ್ಕೂ ಮುನ್ನ ಆರ್ಥಿಕ ಇಲಾಖೆಯಲ್ಲಿ ಅನುದಾನದ ಕೊರತೆ ಎದುರಾಗಿದ್ದರಿಂದ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಸುಮಾರು 4,000 ಕೋಟಿ ರೂ. ಗೃಹಲಕ್ಷ್ಮಿ ಹಣ ಬಾಕಿ ಉಳಿದಿತ್ತು. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ಗೆ ಆಕ್ಷೇಪಣೆ ಸಲ್ಲಿಸಿದ್ದ ಸರ್ಕಾರ, ಬಜೆಟ್ ಲಭ್ಯತೆಯ ಆಧಾರದ ಮೇಲೆ ನೀಡುವ ಈ ಆರ್ಥಿಕ ನೆರವನ್ನು ಕಾನೂನುಬದ್ಧ ಹಕ್ಕಾಗಿ ಕ್ಲೈಮ್ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಇದನ್ನೂ ಓದಿ:
ಅಲ್ಲದೆ, ಮೃತಪಟ್ಟ 1.08 ಲಕ್ಷ ಫಲಾನುಭವಿಗಳ ಖಾತೆಗೆ ತಪ್ಪಾಗಿ ಜಮೆಯಾಗಿದ್ದ 115 ಕೋಟಿ ರೂ. ಅಲ್ಲಿ ಈಗಾಗಲೇ 15.24 ಕೋಟಿ ರೂ.ಅನ್ನು ವಸೂಲಿ ಮಾಡಿರುವುದಾಗಿ ತಿಳಿಸಿದೆ. ಆದಾಗ್ಯೂ, ಪ್ರಸ್ತುತ ಹಬ್ಬದ ಹಿನ್ನೆಲೆಯಲ್ಲಿ ಬಾಕಿ ಕಂತುಗಳನ್ನು ಮಂಜೂರು ಮಾಡುವ ಮೂಲಕ ಸರ್ಕಾರ ಮಹಿಳೆಯರ ನೆರವಿಗೆ ನಿಂತಿದೆ.



