ಹೊಸದಿಗಂತ ವರದಿ ಮುಂಡಗೋಡ:
ಮನೆಯ ನಳದಲ್ಲಿ ನೀರು ತುಂಬಲು ಮೋಟಾರ್ ಸ್ವಿಚ್ ಹಾಕುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ 21 ವರ್ಷದ ವಿವಾಹಿತ ಯುವತಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಕೋಡಂಬಿಯಲ್ಲಿ ಸಂಭವಿಸಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ನಾರಾಯಣಪುರ ನಿವಾಸಿ ಆಯಿಷಾ ಮಹಮ್ಮದಸಲೀಂ ಬೇಗ್ (21) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಬೆಳಿಗ್ಗೆ 7:30ರ ಸುಮಾರಿಗೆ ಮನೆಯ ಮುಂದಿನ ನಳದಲ್ಲಿ ನೀರು ಬಂದಾಗ, ಆಯಿಷಾ ಅವರು ನೀರು ತುಂಬಲು ನಳದ ಮುಂದೆ ಬಕೆಟ್ ಇಟ್ಟು ಅದರಲ್ಲಿ ನೀರೆತ್ತುವ ಮೋಟಾರ್ ಅಳವಡಿಸಿದ್ದರು. ಬಳಿಕ ಕರೆಂಟ್ ಸ್ವಿಚ್ ಹಾಕಲು ಮುಂದಾದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ತೀವ್ರವಾಗಿ ಶಾಕ್ ಹೊಡೆದಿದೆ.
ಇದನ್ನೂ ಓದಿ:
ವಿದ್ಯುತ್ ಸ್ಪರ್ಶದಿಂದ ಪ್ರಜ್ಞಾಹೀನಳಾಗಿ ಕುಸಿದುಬಿದ್ದ ಆಕೆಯನ್ನು ತಕ್ಷಣವೇ ಪಾಳಾ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಮುಂಡಗೋಡ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆಕೆ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದರು.
ಈ ದುರ್ಘಟನೆ ಕುರಿತು ಮೃತಳ ತಂದೆ ಶಬ್ಬೀರಸಾಬ ಸುಲೇಮಾನಸಾಬ (55) ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಗಳ ಸಾವಿನಲ್ಲಿ ತಮಗೆ ಯಾವುದೇ ಸಂಶಯವಿಲ್ಲ ಎಂದು ದೂರಿನಲ್ಲಿ ಸ್ಪಷ್ಟಪಡಿಸಿರುವ ಅವರು, ತಮ್ಮೂರಿನಿಂದ ಬಂದು ಸಂಬಂಧಿಕರೊಂದಿಗೆ ಚರ್ಚಿಸಿ ದೂರು ನೀಡಿದ್ದರಿಂದ ಸ್ವಲ್ಪ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.



