ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಟೆಸ್ಟ್ ಕ್ರಿಕೆಟ್‌ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಹಾಗೂ ಬೇಸರ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದ ಮೂಲಕ ಅವರು ತಾವು ಇನ್ನು ಮುಂದೆ ರೆಡ್-ಬಾಲ್ (ಟೆಸ್ಟ್) ಕ್ರಿಕೆಟ್‌ನಲ್ಲಿ ಆಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ದಿನಗಳನ್ನು ಸ್ಮರಿಸಿಕೊಂಡ ಶಮಿ, “ನಾನು ಮೊದಲ ಬಾರಿಗೆ ಭಾರತದ ಟೆಸ್ಟ್ ಜರ್ಸಿ ಧರಿಸಿದಾಗ ದೇಶಕ್ಕಾಗಿ ಏನಾದರೂ ಸಾಧಿಸುವ ಒಂದೇ ಒಂದು ಕನಸಿತ್ತು. ಇಲ್ಲಿ ಪಡೆದ ಪ್ರತಿ ವಿಕೆಟ್, ಎದುರಿಸಿದ ಪ್ರತಿಯೊಂದು ಗಾಯ ಹಾಗೂ ಪ್ರತಿ ಪುನರಾಗಮನವೂ ನನಗೆ ಜೀವನದ ಪಾಠ ಕಲಿಸಿದೆ” ಎಂದು ಭಾವುಕರಾಗಿದ್ದಾರೆ. ಕೇವಲ ಒಂದು ಆಟದ ಮಾದರಿಯಾಗಿರದೆ, ಟೆಸ್ಟ್ ಕ್ರಿಕೆಟ್ ತಮ್ಮ ಜೀವನದ ಅತ್ಯಂತ ವಿಶೇಷ ಭಾಗವಾಗಿತ್ತು ಎಂದು ತಿಳಿಸಿದ್ದಾರೆ.
ಟೆಸ್ಟ್ ಮಾದರಿಯಿಂದ ಮಾತ್ರ ಹಿಂದೆ ಸರಿದಿರುವ ಶಮಿ, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ಖಚಿತಪಡಿಸಿದ್ದಾರೆ. ಇದರನ್ವಯ ಅವರು ಏಕದಿನ, ಟಿ20 ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಲ್ಲಿ ಎಂದಿನಂತೆ ಕಣಕ್ಕಿಳಿಯಲಿದ್ದಾರೆ.
ತಮ್ಮ ಈ ಕಠಿಣ ಹಾಗೂ ಸುಂದರ ಪಯಣದಲ್ಲಿ ಬೆನ್ನೆಲುಬಾಗಿ ನಿಂತ ಸಹ ಆಟಗಾರರು, ತರಬೇತುದಾರರು, ಕುಟುಂಬ ವರ್ಗದವರು ಹಾಗೂ ಕೋಟ್ಯಂತರ ಭಾರತೀಯ ಅಭಿಮಾನಿಗಳಿಗೆ ಶಮಿ ಧನ್ಯವಾದ ಅರ್ಪಿಸಿದ್ದಾರೆ. ವಿಶೇಷವಾಗಿ ತಮ್ಮ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಬಿಸಿಸಿಐ ಹಾಗೂ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಸಂಸ್ಥೆಗಳಿಗೂ ತಮ್ಮ ವಿಶೇಷ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.



