ದೀಪಾವಳಿ ಎಂದರೆ ಬೆಳಕಿನ ಹಬ್ಬ, ಮನೆಯ ಮುಂದೆ ಹಚ್ಚುವ ಸಾಲು ಸಾಲು ಹಣತೆಗಳು, ಮನೆಯ ಮುಂದಿರುವ ಬಣ್ಣ ಬಣ್ಣದ ಲೈಟ್‌ಗಳು ಅಂದವನ್ನು ದುಪ್ಪಟ್ಟಾಗಿಸುತ್ತವೆ. ಈಗೆಲ್ಲಾ ಮನೆಯ ಮುಂದೆ ಇಡುವುದಕ್ಕೆ ಕ್ಯಾಂಡಲ್, ನೀರು ಹಾಕಿದರೆ ಉರಿಯುವ ದೀಪ ಇನ್ನಿತರ ಬಗೆಬಗೆಯ ದೀಪಗಳು ಮಾರುಕಟ್ಟೆಗೆ ಆಗಮಿಸಿವೆ. ಆದರೆ ಹಿಂದಿನ ಕಾಲದಿಂದಲೂ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈಗಲೂ ಹಳ್ಳಿಯ ಮನೆಗಳಲ್ಲಿ ಮಣ್ಣಿನ ಹಣತೆಗಳಿಂದಲೇ ಅಂಧಕಾರವನ್ನು ಓಡಿಸಲಾಗುತ್ತದೆ. ಇದಕ್ಕೆ ಕಾರಣವೂ ಇದೆ. ಏನು ನೋಡಿ..
ಮಣ್ಣಿನ ದೀಪಗಳು ಭೂಮಿಯ ಜೊತೆ ಸಂಬಂಧ ಹೊಂದಿವೆ. ವಾಸ್ತು ಶಾಸ್ತ್ರದ ಪ್ರಕಾರ ಮಣ್ಣಿನಿಂದ ಮಾಡಿದ ಹಣತೆಗಳನ್ನು ಹಚ್ಚುವುದು ಶ್ರೇಷ್ಠ. ಇದರಲ್ಲಿ ಭೂಮಿತಾಯಿಯ ಆಶೀರ್ವಾದ ಹಾಗೂ ಸಕಾರಾತ್ಮಕ ಶಕ್ತಿ ಅಡಗಿದೆ.

ಮಣ್ಣಿನ ಹಣತೆಗೆ ಎಣ್ಣೆ ಅಥವಾ ತುಪ್ಪ, ಹತ್ತಿಯನ್ನು ಹಾಕಿ ಹಣತೆಯನ್ನು ಹೊತ್ತಿಸಬೇಕು. ಇದು ಸರಳತೆಯ ಸಂಕೇತವಾಗಿದೆ. ಶ್ರೀಮಂತರು, ಬಡವರು ಎನ್ನುವ ಬೇಧವಿಲ್ಲದೇ ಎಲ್ಲರೂ ಒಂದೇ ಮೂಲಭೂತ ಅಂಶವನ್ನು ಹಂಚಿಕೊಳ್ಳುತ್ತಾರೆ ಎನ್ನುವುದನ್ನು ಇದು ನೆನಪಿಸುತ್ತದೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಜಾಸತ್ತಾತ್ಮಕ ಸಂಕೇತ ಇದಾಗಿದೆ.
ಪುರಾಣಗಳ ಪ್ರಕಾರ ಭಗವಾನ್ ಶ್ರೀರಾಮನು ವನವಾಸವನ್ನು ಮುಗಿಸಿ ಅಯೋಧ್ಯೆಗೆ ವಾಪಾಸ್ ಬಂದಾಗ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಾಮಾತೆಯನ್ನು ಸ್ವಾಗತಿಸಲು ಇಡೀ ಅಯೋಧ್ಯೆಯ ಜನ ಮನೆಯ ಮುಂದೆ ಮಣ್ಣಿನ ಹಣತೆಗಳನ್ನು ಬೆಳಗಿಸಿದ್ದರು ಎಂದು ನಂಬಲಾಗಿದೆ.
ಮಣ್ಣಿನ ಹಣತೆಯಿಂದ ಹೊಮ್ಮುವ ಜ್ವಾಲೆಯು ಅಜ್ಞಾನ, ಅಂಧಕಾರ, ಕ್ರೋಧ, ದುಷ್ಟತನವನ್ನು ಹೊರಹಾಕುವ ಶಕ್ತಿ ಹೊಂದಿದೆ ಎನ್ನುವ ನಂಬಿಕೆಯಿದೆ.
ಕುಂಬಾರರು ದೀಪಾವಳಿ ಹಬ್ಬದ ಸಮಯದಲ್ಲಿ ಸಾವಿರಾರು ಮಣ್ಣಿನ ಹಣತೆಗಳನ್ನು ಮಾಡಿ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಾರೆ. ಉಳ್ಳವರು ಫ್ಯಾನ್ಸಿ ಆಗಿರುವ ಲೈಟ್‌ಗಳನ್ನು ಬಿಟ್ಟು ಮಣ್ಣಿನ ಹಣತೆಗಳನ್ನು ಖರೀದಿ ಮಾಡಿದರೆ ಕುಂಬಾರರ ಬಾಳಿನಲ್ಲಿಯೂ ಬೆಳಕು ಮೂಡುತ್ತದೆ. ಜೊತೆಗೆ ಸಾಂಪ್ರದಾಯಿಕ ಕೌಶಲ ಜೀವಂತವಾಗಿರುತ್ತದೆ.



