ವರ್ಷದಲ್ಲಿ ಬರುವ ಎಷ್ಟೋ ಹಬ್ಬಗಳಲ್ಲಿ ಪಟಾಕಿ ಸಿಡಿಸಲಾಗುತ್ತದೆ, ಬೇರೆ ಬೇರೆ ಧರ್ಮದ ಆಚರಣೆಗಳಲ್ಲಿ ಪಟಾಕಿ ಸಿಡಿಸಲಾಗುತ್ತದೆ. ಸತ್ತಾಗ, ಹುಟ್ಟಿದಾಗ, ಮದುವೆಯಾದಾಗ, ಹೊಸ ಗಾಡಿ ಖರೀದಿ ಮಾಡಿದಾಗ ಹೀಗೆ ಸಂದರ್ಭಕ್ಕೆ ತಕ್ಕಾಗೆಲ್ಲಾ ಪಟಾಕಿ ಸಿಡಿಸಲಾಗುತ್ತದೆ. ಇಷ್ಟೆಲ್ಲಾ ಸಂದರ್ಭಗಳಲ್ಲಿ ಪಟಾಕಿ ಹೊಡೆಯುವಾಗ ಆಗದ ವಾಯುಮಾಲೀನ್ಯ, ಶಬ್ದ ಮಾಲೀನ್ಯ ದೀಪಾವಳಿ ದಿನದಲ್ಲಿ ಆಗೋದು ಯಾಕೆ? ಟ್ರಾಫಿಕ್ನಿಂದ ಆಗದ ವಾಯುಮಾಲೀನ್ಯ ಒಂದು ದಿನದ ಪಟಾಕಿ ಹೊಡೆತದಿಂದ ಆಗಿಬಿಡುತ್ತದಾ??

ವರ್ಷಕ್ಕೆ ಒಮ್ಮೆ ಬರುವ ಹಬ್ಬಕ್ಕೆ ಹೊಡೆಯುವ ಪಟಾಕಿಯಿಂದ ನೂರಾರು ಪ್ರಾಣಿ ಪಕ್ಷಿಗಳು ಜೀವ ಬಿಡುತ್ತಿವೆ. ಮನುಷ್ಯರ ಹಾಗೆ ಅವರಿಗೂ ಇರೋದು ಒಂದೇ ಲೈಫ್! ಒಂದೆರಡು ದಿನದ ಸಂಭ್ರಮಕ್ಕೆ ಇಡೀ ವರ್ಷ ಶ್ವಾಸಕೋಶದ ತೊಂದರೆಯಿಂದ ಒದ್ದಾಡಬೇಕಾ? ಪ್ರತೀ ಊರಿನ, ಪ್ರತೀ ಮನೆಯಲ್ಲಿಯೂ ಏರ್ ಪ್ಯೂರಿಫೈಯರ್ ಇರಬೇಕಾ? ನಮ್ಮ ಮುಂದಿನ ಪೀಳಿಗೆ ಜೀವಿಸೋಕಾಗಷ್ಟು ಕೆಟ್ಟ ವಾತಾವರಣ ಬಿಟ್ಟು ಹೋಗಬೇಕಾ ಎನ್ನುವುದು ಪರಿಸರವಾದಿಗಳ ವಾದವಾಗಿದೆ.
ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯುವುದರಿಂದ ಎಷ್ಟೆಲ್ಲಾ ಸಮಸ್ಯೆಯಾಗುತ್ತಿದೆ ಎಂದು ನೂರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ, ವಿಡಿಯೋಗಳನ್ನು ಅಪ್ಲೋಡ್ ಮಾಡ್ತಿದ್ದಾರೆ. ಹಾಗೆ ಹಲವರು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಡೆಯಬೇಕು. ನಮ್ಮ ಹಿಂದು ಸಂಸ್ಕೃತಿ ಉಳಿಯಬೇಕು. ವರ್ಷದಲ್ಲಿ ಒಂದೆರಡು ದಿನ ಪಟಾಕಿ ಹೊಡೆದರೆ ಏರ್ ಕ್ವಾಲಿಟಿ ಹಾಳಾಗೋದಿಲ್ಲ. ಅನಾವಶ್ಯಕವಾಗಿ ಗಾಡಿಗಳನ್ನು ನಿತ್ಯವೂ ರಸ್ತೆಗೆ ಇಳಿಸೋದು, ಮುಂದಿನ ಕ್ರಾಸ್ನಲ್ಲಿರುವ ಸ್ನೇಹಿತರ ಮನೆಗೆ ಹೋಗೋಕೆ ಬೈಕ್ ಬಳಸೋದು! ಇಂಥವು ಕೊನೆಯಾದರೆ ಗಾಳಿ ಪರಿಶುದ್ಧವಾಗಿರುತ್ತವೆ ಅನ್ನೋದು ಹಲವರ ವಾದವಾಗಿದೆ.

ಪಟಾಕಿಗಳನ್ನು ಯಾಕೆ ಹೊಡೆಯಬೇಕು?
ಪಟಾಕಿಗಳು ಹಬ್ಬದ ಆಚರಣೆ, ಸಂತೋಷದ ಪ್ರದರ್ಷನ ಹಾಗೂ ಸಾಂಪ್ರದಾಯಿಕತೆಯ ನಂಬಿಕೆಯಾಗಿದೆ. ಕತ್ತಲೆಯ ಮೇಲೆ ಬೆಳಕಿನ, ಅಧರ್ಮದ ಮೇಲೆ ಧರ್ಮದ ವಿಜಯವನ್ನು ಸಂಭ್ರಮಿಸಲು ಪಟಾಕಿಗಳನ್ನು ಹೊಡೆಯಲಾಗುತ್ತದೆ. ದೀಪಾವಳಿಯ ದಿನದಂದು ಲಕ್ಷ್ಮೀ ದೇವಿ ಮನೆಗೆ ಬರುತ್ತಾಳೆ ಎನ್ನುವ ನಂಬಿಕೆ ಇದೆ. ಆಕೆ ಮನೆಗೆ ಬರುವಾಗ ಅದ್ಧೂರಿಯಾಗಿ ಸ್ವಾಗತಿಸಲು ಪಟಾಕಿಗಳನ್ನು ಹೊಡೆಯುತ್ತಾರೆ. ಪುರಾಣಗಳ ಪ್ರಕಾರ ಪಟಾಕಿಯ ದೊಡ್ಡ ಬೆಳಕು ಹಾಗೂ ಶಬ್ದ ನಕಾರಾತ್ಮಕ ಶಕ್ತಿಯನ್ನು ಓಡಿಸುತ್ತದೆ ಎನ್ನುವ ನಂಬಿಕೆಯೂ ಇದೆ. ಪಟಾಕಿ ಹೊಡೆದರೆ ಮಾಲೀನ್ಯ ಆಗಬಾರದು ಎನ್ನುವ ಕಾರಣ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ಬಳಸಲು ಆದ್ಯತೆ ನೀಡಲಾಗುತ್ತದೆ.

ಪಟಾಕಿಗಳನ್ನು ಹೊಡೆಯಬೇಡಿ ಅಂತಿಲ್ಲ, ಆದರೆ..
ಪಟಾಕಿಗಳನ್ನು ಹೊಡೆಯುವುದೇ ಬೇಡ ಎಂದು ಕೆಲ ಪರಿಸರತಜ್ಞರು ಹೇಳುತ್ತಾರೆ. ಅದು ನಮ್ಮ ಪರಿಸರವನ್ನು ಉಳಿಸುವ ಕಾರಣಕ್ಕಾಗಿ ಮಾತ್ರ. ಸ್ವಲ್ಪ ಹೆಚ್ಚು ಖರ್ಚಾದರೂ ಪರವಾಗಿಲ್ಲ. ವಾಯು ಮಾಲೀನ್ಯ ತಡೆಗಟ್ಟುವ ಹಸಿರು ಪಟಾಕಿಗಳನ್ನು ತಂದು ಹೊಡೆಯಿರಿ. ಸರ್ಕಾರ ಹೇಳಿರುವಂತೆ ಬೆಳಗ್ಗೆ ಆರರಿಂದ ರಾತ್ರಿ ಹತ್ತು ಗಂಟೆಯತನಕ ಮಾತ್ರ ಪಟಾಕಿ ಹೊಡೆಯಿರಿ. ನಿಮ್ಮ ಮನೆ ಅಥವಾ ಅಕ್ಕಪಕ್ಕದ ಮನೆಗಳಲ್ಲಿ ಪುಟ್ಟ ಮಕ್ಕಳು, ವಯಸ್ಸಾದವರು ಇದ್ದಲ್ಲಿ ದೊಡ್ಡ ಶಬ್ದ ಮಾಡುವ ಪಟಾಕಿಗಳನ್ನು ಅವಾಯ್ಡ್ ಮಾಡಿ. ಹೆಚ್ಚು ಕಸ ಹರಡುವ ಪಟಾಕಿಗಳು, ದಟ್ಟ ಹೊಗೆ ಸೃಷ್ಟಿಸುವ ಪಟಾಕಿಗಳಿಂದ ದೂರ ಇರಿ. ಒಂದು ದಿನದ ಸಂಭ್ರಮದಿಂದಾಗಿ ಜೀವನವಿಡೀ ಕಷ್ಟಪಡುವ ಸ್ಥಿತಿ ಉಂಟಾಗುವುದು ಬೇಡ.

https://www.instagram.com/reel/Dfff8kdTqQu/?cplk=MWFqaWJ2a3lvbnlyNg%3D%3D
ಪ್ರಾಣಿಗಳ ಬಗ್ಗೆ ಕೊಂಚ ದಯೆ ಇರಲಿ
ನಾಯಿಗಳು ಹಾಗೂ ಇತರ ಪ್ರಾಣಿಗಳಿಗೆ ಸದ್ದನ್ನು ಗ್ರಹಿಸುವ ಶಕ್ತಿ ಸೂಕ್ಷ್ಮವಾಗಿರುತ್ತದೆ. ನಮಗೆ ಕೇಳಿಸುವ ಇಪ್ಪತ್ತು ಪಟ್ಟು ಹೆಚ್ಚು ಸದ್ದು ಅವುಗಳಿಗೆ ಕೇಳಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಾಯಿಗಳು, ಬೆಕ್ಕುಗಳು ಪಟಾಕಿ ಶಬ್ದಕ್ಕೆ ಹೆದರಿ ನಡುಗುವ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಪಕ್ಷಿಗಳು ಮೃತಪಟ್ಟಿರುವುದು, ಮಂಗಗಳು ಹೆದರುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಮಕ್ಕಳಂತೆ ನಾಯಿಗಳನ್ನು ಸಾಕುವ ಪೋಷಕರಿಗೆ ದೀಪಾವಳಿ ಎಂದು ಮುಗಿಯುತ್ತದೋ ಎನಿಸಿಬಿಟ್ಟಿದೆ. ನಾಯಿಗಳು ಸದ್ದಿಗೆ ಹೆದರಿ ಮಕ್ಕಳಂತೆ ನಡುಗುತ್ತಾ ಕುಳಿತಿರುವುದು ಎಂತವರಿಗೂ ಪಾಪ ಎನಿಸುವಂತಾಗಿದೆ. ಇನ್ನೊಂದು ವಿಡಿಯೋದಲ್ಲಿ ಮಂಗಗಳು ಹಾಗೂ ಮರಿ ಪಟಾಕಿ ಸದ್ದಿಗೆ ಬೆಚ್ಚಿಬೀಳುವುದನ್ನು ನೋಡಬಹುದಾಗಿದೆ.

ಮನುಷ್ಯರ ಖುಷಿ, ಎಂಟರ್ಟೈನ್ಮೆಂಟ್ಗಾಗಿ ಪ್ರಾಣಿಗಳು, ವಯಸ್ಸಾದವರು ಜೀವ ಕಳೆದುಕೊಳ್ಳುವುದು ಉತ್ತಮವಾದುದಲ್ಲ. ಪಟಾಕಿ ಹೊಡೆಯುವುದನ್ನು ನಿಲ್ಲಿಸಿ ಎಂದು ಹೇಳಲು ಸಾಧ್ಯವಿಲ್ಲ. ಪಟಾಕಿ ಹೊಡೆಯಿರಿ ಅದು ನಮ್ಮ ಆಚರಣೆ, ಸಂಪ್ರದಾಯ. ಅತಿಯಾದ ಸದ್ದು, ಅತಿಯಾದ ಮಾಲೀನ್ಯ ಮಾಡುವ ಕೆಲ ಪಟಾಕಿಗಳನ್ನು ಅವಾಯ್ಡ್ ಮಾಡಿ.



