ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಪ್ರವಾಸಿಗರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೆಚ್ಚಿಸುವ ಹಾಗೂ ವನ್ಯಜೀವಿ ಸಂರಕ್ಷಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬರೋಬ್ಬರಿ ರೂ. 38 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ರಾಮಲಿಂಗ ರೆಡ್ಡಿಅವರು ಮಂಗಳವಾರ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಪಶುವೈದ್ಯೆಯ ನೆನಪಿನಲ್ಲಿ “ಸಮೀಕ್ಷಾ” ನಾಮಕರಣ
ಈ ಸಮಾರಂಭದ ಅತ್ಯಂತ ಭಾವುಕ ಮತ್ತು ಪ್ರಮುಖ ಆಕರ್ಷಣೆಯೆಂದರೆ, ಇತ್ತೀಚೆಗೆ ಶಿವಮೊಗ್ಗದಲ್ಲಿ ಹಿಪ್ಪೋಪೊಟಮಸ್ (ನೀರಾನೆ) ಚಿಕಿತ್ಸೆ ನೀಡುತ್ತಿದ್ದ ಸಂದರ್ಭದಲ್ಲಿ ದುರದೃಷ್ಟವಶಾತ್ ಪ್ರಾಣಿ ದಾಳಿಯಿಂದ ಸಾವಿಗೀಡಾಗಿದ್ದ ಯುವ ಪಶುವೈದ್ಯಾಧಿಕಾರಿ ಡಾ. ಸಮೀಕ್ಷಾ ರೆಡ್ಡಿ ಅವರ ಸ್ಮರಣಾರ್ಥವಾಗಿ, ಬನ್ನೇರುಘಟ್ಟದಲ್ಲಿ ಜನಿಸಿರುವ ಮರಿ ನೀರಾನೆಗೆ ಮತ್ತು ಅಲ್ಲಿನ ನೀರಾನೆಗಳ ಬ್ಲಾಕ್‌ಗೆ ಸಚಿವರು “ಸಮೀಕ್ಷಾ” ಎಂದು ಹೆಸರಿಡುವಂತೆ ಸೂಚನೆ ನೀಡಿ ಗೌರವ ಸಲ್ಲಿಸಿದರು.
ಲೋಕಾರ್ಪಣೆಗೊಂಡ ನೂತನ ಸೌಲಭ್ಯಗಳು
ಬನ್ನೇರುಘಟ್ಟಕ್ಕೆ ಬರುವ ಪ್ರವಾಸಿಗರಿಗೆ ಜಾಗತಿಕ ಮಟ್ಟದ ಅನುಭವ ನೀಡಲು ಸಚಿವರು ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ಇಲಾಖೆಯ ನೂತನವಾಗಿ ನಿರ್ಮಿಸಲಾಗಿರುವ ಭವ್ಯ ಆಡಳಿತ ಕಚೇರಿ ಕಟ್ಟಡ “ಅಡವಿ” ಹಾಗೂ ಉದ್ಯಾನವನದ ಮುಂಭಾಗಕ್ಕೆ ಹೊಸ ಕಳೆ ನೀಡುವ ನಿಟ್ಟಿನಲ್ಲಿ ನವೀಕರಿಸಲಾದ ಮುಖ್ಯ ಪ್ರವೇಶ ದ್ವಾರವನ್ನು ಲೋಕಾರ್ಪಣೆಗೊಳಿಸಲಾಯಿತು.
ಪ್ರವಾಸಿಗರು ಇನ್ಮುಂದೆ ಉದ್ಯಾನವನದ ಒಳಗೆ ಪರಿಸರ ಸ್ನೇಹಿಯಾಗಿ ಸಂಚರಿಸಲು ಹೊಚ್ಚಹೊಸ ಎಲೆಕ್ಟ್ರಿಕ್ ವಾಹನಗಳ (EV) ಸೇವೆಗೆ ಚಾಲನೆ ನೀಡಲಾಯಿತು. ತೋಳಗಳು, ಚೀತಾಗಳು, ಎಮು ಮತ್ತು ರಿಯಾ ಪಕ್ಷಿಗಳು ಹಾಗೂ ಫೆಸೆಂಟ್ ಪಕ್ಷಿಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಹೊಸ ಆವರಣಗಳನ್ನು ಉದ್ಘಾಟಿಸಲಾಯಿತು. ಆನೆಗಳ ಆರೋಗ್ಯ, ಆರೈಕೆ ಹಾಗೂ ಕಲ್ಯಾಣ ನಿರ್ವಹಣೆಗೆ ಮೀಸಲಾಗಿರುವ “ಸುವರ್ಣ ಆನೆ ಆರೈಕೆ ಕೇಂದ್ರ”ದ ವಿಶೇಷ ವೀಕ್ಷಣಾ ಗೋಪುರವನ್ನು ಸಚಿವರು ಉದ್ಘಾಟಿಸಿ ವೀಕ್ಷಿಸಿದರು.
ಇದರೊಂದಿಗೆ ಪ್ರವಾಸಿಗರಿಗಾಗಿ ಅತ್ಯಾಧುನಿಕ ಸುವರ್ಣಮುಖಿ ಕೆಫೆ, ಹೊಸದಾದ ಝೂ ಶಾಪ್ (Zoo Shop), ಪ್ರಾಣಿಗಳಿಗಾಗಿ ಲೈವ್ ಫೀಡ್ ಘಟಕ, ಕೇಂದ್ರೀಯ ನರ್ಸರಿ, ನೂತನ ಕ್ಯಾರಂಟೈನ್ ಬ್ಲಾಕ್ ಹಾಗೂ ಅರಣ್ಯ ಸಿಬ್ಬಂದಿಗಳಿಗಾಗಿ ನಿರ್ಮಿಸಲಾದ ವಸತಿಗೃಹಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಇದನ್ನೂ ಓದಿ:
ಈ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಶಾಸಕರುಗಳಾದ ಬಿ.ಶಿವಣ್ಣ ಹಾಗೂ ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥ ರವಿ ಬಿ. ಪಿ. ಸೇರಿದಂತೆ ಇಲಾಖೆಯ ಉನ್ನತ ಮಟ್ಟದ ಪ್ರಮುಖ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು. ಒಟ್ಟಾರೆಯಾಗಿ ಈ ರೂ. 38 ಕೋಟಿ ವೆಚ್ಚದ ಯೋಜನೆಗಳು ಬನ್ನೇರುಘಟ್ಟ ಪ್ರವಾಸೋದ್ಯಮಕ್ಕೆ ಹೊಸ ದಿಕ್ಸೂಚಿಯಾಗಲಿವೆ.



