November 11, 2026
Wednesday, November 11, 2026
spot_img

ಜನವರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ; ಸರ್ಕಾರದಿಂದ ಎಲ್ಲಾ ರೀತಿಯ ಸಿದ್ಧತೆ ಪೂರ್ಣ ಎಂದ ಎಚ್.ಸಿ.ಬಾಲಕೃಷ್ಣ

ಹೊಸದಿಗಂತ ವರದಿ ರಾಮನಗರ:

ಜನವರಿ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ಬಿಡದಿಯ ನಲ್ಲಿಗುಡ್ಡೆ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರೇಟರ್ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಿಂದ 5 ಕೋಟಿ ಹಾಗೂ ಬಿಎಂಐಸಿಪಿಯಿಂದ 5 ಕೋಟಿ ಸೇರಿದಂತೆ ಒಟ್ಟು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆವರಣದಲ್ಲಿ ವಾಯು ವಿಹಾರಕ್ಕೆ ಉತ್ತಮ ವಾಕಿಂಗ್ ಪಾಥ್, ಸೈಕ್ಲಿಂಗ್ ಪಾಥ್ ಹಾಗೂ ಉದ್ಯಾನವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಸ್ವಲ್ಪ ಗೊಂದಲ ಉಂಟಾಗಿದೆ. ಹೀಗಾಗಿ ಚುನಾವಣೆ ಸ್ವಲ್ಪ ತಡವಾಗುತ್ತಿದೆ ಅಷ್ಟೇ. ಹಳೆ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಬೇಕೇ ಅಥವಾ ಹೊಸ ಪಟ್ಟಿಯಲ್ಲಿ ನಡೆಸಬೇಕೇ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಗೆ ನೈತಿಕತೆ ಇಲ್ಲ

ಬೆಲೆ ಏರಿಕೆ ಖಂಡಿಸಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ ಟೀಕಿಸಿದ ಸಚಿವರು ಬೆಲೆ ಏರಿಕೆ ವಿಚಾರದಲ್ಲಿ ಹೋರಾಟ ಮಾಡಲು ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಕಳೆದ 13 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಕನ್ನ ಹಾಕಿದೆ. ಕಷ್ಟದಲ್ಲಿರುವ ಮಹಿಳೆಯರ ನೆರವಿಗೆ ಬರಲೆಂದೇ ನಮ್ಮ ಸರ್ಕಾರ ಪ್ರತಿ ತಿಂಗಳು 2,000 ರೂಪಾಯಿ ಗೃಹಲಕ್ಷ್ಮಿ ಹಣ ನೀಡುತ್ತಿದೆ ಎಂದರು.

​ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ರಾಜ್ಯದ ಜನ ಕಣ್ಣೀರು ಹಾಕುತ್ತಿದ್ದಾರೆ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ರಾಜ್ಯವೇನು ಸುಭಿಕ್ಷವಾಗಿತ್ತಾ ವಿಜಯೇಂದ್ರ ಅವರಿಗೆ ಬೆಳಿಗ್ಗೆ ಎದ್ದರೆ ನಮ್ಮನ್ನು ಬೈಯುವುದೇ ಕೆಲಸವಾಗಿದೆ ಎಂದು ಟೀಕಿಸಿದರು.

ರೈತರು ಭಯಪಡುವ ಅಗತ್ಯವಿಲ್ಲ

ಬರ ಪರಿಹಾರದ ಕುರಿತು ರೈತರಿಗೆ ಯಾವುದೇ ಗೊಂದಲ ಬೇಡ. ಪ್ರತಿಯೊಬ್ಬ ಅರ್ಹ ರೈತನಿಗೂ ಎರಡು‌ ಕಂತಿನಲ್ಲಿ 5,000 ಬಿಡುಗಡೆ ಆಗಲಿದೆ. ಕೆಲವು ರೈತರಿಗೆ 1,500 ಹಾಗೂ 2,000 ರೂಪಾಯಿ ಬರ ಪರಿಹಾರ ತಲುಪಿರುವ ವಿಚಾರ ಗಮನಕ್ಕೂ ಬಂದಿದೆ. ಈ ಬಗ್ಗೆ ಉಪಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟನೆ ನೀಡಿದ್ದು, ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಲಾಗುವುದು. ರೈತರ ಖಾತೆಯಲ್ಲಿನ ಅಡತಡೆ ನಿವಾರಿಸಿ ಬರ ಪರಿಹಾರ ಪಾವತಿಸಲಾಗುವುದು. ಯಾವುದೇ ರೈತರು ಭಯಪಡುವ ಅಗತ್ಯವಿಲ್ಲ‌ ಎಂದು ಸ್ಪಷ್ಟನೆ ನೀಡಿದರು.

ಗೃಹಲಕ್ಷ್ಮಿ ಹಣ ಬಿಡುಗಡೆ

ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಮೂರು ತಿಂಗಳ ಹಣವನ್ನು ಒಟ್ಟಿಗೆ ದೀಪಾವಳಿ ಗಿಫ್ಟ್ ಆಗಿ ಬಿಡುಗಡೆ ಮಾಡಿದ್ದೇವೆ. ಹಂತ ಹಂತವಾಗಿ ಪ್ರತಿಯೊಬ್ಬ ಫಲಾನುಭವಿಯ ಖಾತೆಗೆ ಜಮಾ ಮಾಡುವ ಕೆಲಸ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:

ಹಿರಿಯೂರು ಕಾಂಗ್ರೆಸ್ ಗೆಲ್ಲಲಿದೆ

ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸಚಿವ ಬಾಲಕೃಷ್ಣ, ಚುನಾವಣೆ ಸಂಬಂಧ ನನಗೂ ಒಂದು ಹೋಬಳಿಯ ಉಸ್ತುವಾರಿ ನೀಡಲಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಅತ್ಯುತ್ತಮ ವಾತಾವರಣವಿದ್ದು, ನಾವು ಗೆಲ್ಲುವುದು ನಿಶ್ಚಿತ. ಅಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸುತ್ತಾರೋ ಅಥವಾ ಜೆಡಿಎಸ್ ಟಿಕೆಟ್ ಪಡೆಯುತ್ತಾರೋ ಗೊತ್ತಿಲ್ಲ. ಎದುರಾಳಿ ಯಾರೇ ಇರಲಿ, ನಾವು ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂದರು

ಈ ಸಂದರ್ಭದಲ್ಲಿ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್, ಬಿಡದಿ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ನರಸಿಂಹಮೂರ್ತಿ, ಸದಸ್ಯರಾದ ಸಿ.ಉಮೇಶ್, ನವೀನ್, ಬಿಂದಿಯಾ, ಮಹಿಮಾ ಕುಮಾರ್, ಲಲಿತಾ ನರಸಿಂಹಯ್ಯ, ಮುಖಂಡರಾದ ಚಂದ್ರಶೇಖರ್, ಹೊಸೂರು ರಾಜಣ್ಣ, ಸಿದ್ದರಾಜು, ಬ್ಯಾಟಪ್ಪ, ಹೇಮಂತ್, ಗುತ್ತಿಗೆದಾರರಾದ ವಾಸು, ಗೋವಿಂದ ಮತ್ತಿತರರು ಇದ್ದರು.

Must Read

Skip to toolbar