ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಅವರ ಈ ಬಾರಿಯ ದೀಪಾವಳಿ ವಿಶೇಷ ಉಡುಗೆ-ತೊಡುಗೆ ಈಗ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಅಬ್ಬಾಸ್ ಹಫೀಜ್ ಅವರು ನಟಿ ಕರೀನಾ ಕಪೂರ್ ಹಾಗೂ ಅವರ ವಸ್ತ್ರವಿನ್ಯಾಸಕಿ ರಿಯಾ ಕಪೂರ್ ಅವರಿಗೆ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ.
ವಿವಾದಕ್ಕೆ ಕಾರಣವೇನು?
ದೀಪಾವಳಿ ಹಬ್ಬದ ಪ್ರಯುಕ್ತ ಕರೀನಾ ಕಪೂರ್ ಅವರು ವಿಶೇಷ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಡಿಸೈನರ್ ಪುನೀತ್ ಬಲಾನಾ ವಿನ್ಯಾಸಗೊಳಿಸಿದ ಬೆಳ್ಳಿ ಬಣ್ಣದ ಕಫ್ತಾನ್ ಹಾಗೂ ಅದಕ್ಕೆ ಒಪ್ಪುವ ಪೇಟವನ್ನು ಕರೀನಾ ಧರಿಸಿದ್ದರು. ಆದರೆ, ಅವರ ಕುತ್ತಿಗೆಯಲ್ಲಿದ್ದ 30 ಕ್ಯಾರೆಟ್ನ ಪಚ್ಚೆ ಹಾರದ ಪೆಂಡೆಂಟ್ ನಲ್ಲಿ ಪವಿತ್ರ ಕುರಾನ್ನ ‘ಆಯತ್-ಉಲ್-ಕುರ್ಸಿ’ ಸಾಲುಗಳನ್ನು ಕೆತ್ತಲಾಗಿದೆ ಎಂಬ ಚರ್ಚೆ ಶುರುವಾಯಿತು. ಪವಿತ್ರ ಧಾರ್ಮಿಕ ಸಾಲುಗಳನ್ನು ಕೇವಲ ಫ್ಯಾಷನ್ ಪ್ರದರ್ಶನಕ್ಕಾಗಿ ಬಳಸಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತವಾಗಿದೆ.
https://www.instagram.com/p/Dfg0o8mkdJU/?utm_source=ig_web_button_share_sheet
ಈ ಕುರಿತು ನೋಟಿಸ್ ನೀಡಿರುವ ಅಬ್ಬಾಸ್ ಹಫೀಜ್, ಸಾಮಾಜಿಕ ಜಾಲತಾಣಗಳಿಂದ ಆ ಫೋಟೋಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಕರೀನಾ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. “ನಾನು ಒಬ್ಬ ಮುಸ್ಲಿಂ ಆಗಿ ನನ್ನ ವೈಯಕ್ತಿಕ ನೆಲೆಯಲ್ಲಿ ಈ ನೋಟಿಸ್ ನೀಡಿದ್ದೇನೆ, ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಫೋಟೋ ಡಿಲೀಟ್ ಮಾಡದಿದ್ದರೆ ಪೊಲೀಸ್ ಅಥವಾ ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದ್ದಾರೆ.
ವಿವಾದಕ್ಕೀಡಾಗಿರುವ ಈ ಆಭರಣಗಳು ಸೈಫ್ ಅಲಿ ಖಾನ್ ಅವರ ಕುಟುಂಬದ ಪಾರಂಪರಿಕ ಆಸ್ತಿಯಾಗಿವೆ. ಕರೀನಾ ಧರಿಸಿದ್ದ 200 ವರ್ಷಗಳ ಹಳೆಯ ‘ಕಲ್ಗಿ’ ಭೋಪಾಲ್ ನವಾಬರಿಗೆ ಸೇರಿದ್ದರೆ, ಪಚ್ಚೆಯ ಪೆಂಡೆಂಟ್ ಭೋಪಾಲ್ ಬೇಗಂ ಅವರಿಗೆ ಸೇರಿದ್ದಾಗಿದೆ. ಸೈಫ್ ಅಲಿ ಖಾನ್ ಅವರ ಅಜ್ಜಿ ಸಾಜಿದಾ ಸುಲ್ತಾನ್ ಅವರು ಭೋಪಾಲ್ನ ಕೊನೆಯ ಆಡಳಿತಗಾರ ನವಾಬರ ಪುತ್ರಿಯಾಗಿದ್ದರು. ಸದ್ಯ ಈ ವಿವಾದದ ಕುರಿತು ಕರೀನಾ ಕಪೂರ್ ಆಗಲಿ ಅಥವಾ ರಿಯಾ ಕಪೂರ್ ಆಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.



