November 13, 2026
Friday, November 13, 2026
spot_img

ಹಣಕ್ಕಿಂತ ಗೌರವವೇ ಮುಖ್ಯ: ‘ರಾಮಾಯಣ’ ಬಜೆಟ್ ಬಗ್ಗೆ ನಿರ್ಮಾಪಕರ ಹೆಮ್ಮೆಯ ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಧೂಳೆಬ್ಬಿಸುತ್ತಿದೆ. ತೆರೆಕಂಡ ಕೇವಲ ಒಂದೇ ವಾರದಲ್ಲಿ ವಿಶ್ವದಾದ್ಯಂತ ಬರೋಬ್ಬರಿ 1,000 ಕೋಟಿ ರೂಪಾಯಿ ಗಳಿಸುವ ಮೂಲಕ ಹೊಸ ದಾಖಲೆ ಬರೆದಿದೆ. ಆದರೆ, ಈ ಚಿತ್ರಕ್ಕೆ ಸುಮಾರು 4,000 ಕೋಟಿ ರೂಪಾಯಿಯಷ್ಟು ಬಂಡವಾಳ ಹೂಡಲಾಗಿರುವುದರಿಂದ, ಹಾಕಿದ ಹಣ ವಾಪಸ್ ಬರುತ್ತದೆಯೇ ಎಂಬ ಚರ್ಚೆ ಇದೀಗ ಜೋರಾಗಿದೆ. ಈ ಎಲ್ಲಾ ಅನುಮಾನಗಳಿಗೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಇದೀಗ ತೆರೆ ಎಳೆದಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ನಮಿತ್ ಮಲ್ಹೋತ್ರಾ, ಸಿನಿಮಾದ ಲಾಭ-ನಷ್ಟದ ಲೆಕ್ಕಾಚಾರದ ಬಗ್ಗೆ ಸ್ಪಷ್ಟವಾಗಿ ಉತ್ತರಿಸಿದ್ದಾರೆ. “ರಾಮಾಯಣ ಕೇವಲ ವ್ಯಾಪಾರಕ್ಕಾಗಿ ಮಾಡಿದ ಸಿನಿಮಾವಲ್ಲ. ಜಾಗತಿಕ ಮಟ್ಟದ ಸಿನಿಮಾಗಳಿಗೆ ಭಾರತೀಯ ಚಿತ್ರರಂಗವೂ ಸರಿಸಾಟಿಯಾಗಿ ನಿಲ್ಲಬಲ್ಲದು ಎಂದು ತೋರಿಸುವುದು ನಮ್ಮ ಕನಸಾಗಿತ್ತು. ತಾಜ್ ಮಹಲ್‌ಗೆ ಹೇಗೆ ಬೆಲೆ ಕಟ್ಟಲು ಸಾಧ್ಯವಿಲ್ಲವೋ, ಹಾಗೆಯೇ ರಾಮಾಯಣವನ್ನೂ ಕೇವಲ ಹಣದ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ” ಎಂದು ಅವರು ಭಾವುಕರಾಗಿ ನುಡಿದಿದ್ದಾರೆ. ಅಲ್ಲದೆ, ಈ ಸಿನಿಮಾಗಾಗಿ ತಾವು ಯಾರಿಂದಲೂ ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ ಎಂಬ ಅಚ್ಚರಿಯ ಸಂಗತಿಯನ್ನೂ ಅವರು ಬಿಚ್ಚಿಟ್ಟಿದ್ದಾರೆ.

ಮೊದಲ ಭಾಗಕ್ಕೆ ನಿರೀಕ್ಷಿತ ಗಳಿಕೆ ಬರದಿದ್ದರೂ ತಮಗೆ ಯಾವುದೇ ಚಿಂತೆಯಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ. ಸದ್ಯಕ್ಕೆ ಪ್ರೇಕ್ಷಕರ ಪ್ರೀತಿ ಸಿಕ್ಕರೆ ಅಷ್ಟೇ ಸಾಕು ಎಂದಿರುವ ಅವರು, 2028ರ ದೀಪಾವಳಿಗೆ ತೆರೆಗೆ ಬರಲಿರುವ ‘ರಾಮಾಯಣ ಪಾರ್ಟ್ 2’ ಮೊದಲ ಭಾಗಕ್ಕಿಂತ ಇನ್ನೂ ಅದ್ಧೂರಿಯಾಗಿ ಮೂಡಿಬರಲಿದೆ ಎಂದಿದ್ದಾರೆ. ಎರಡೂ ಭಾಗಗಳು ಬಿಡುಗಡೆಯಾದ ನಂತರವಷ್ಟೇ ವಾಣಿಜ್ಯ ಲಾಭದ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದಾರೆ.

ಇನ್ನು ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಜೀವ ತುಂಬಿರುವ ಯಶ್ ಕೂಡ 4,000 ಕೋಟಿ ಬಜೆಟ್ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. “ವಿದೇಶಗಳಲ್ಲಿ ನಮ್ಮ ಸಿನಿಮಾಗಳಿಗೆ ತಕ್ಕ ಗೌರವ ಸಿಗಬೇಕಾದರೆ, ನಾವು ನಮ್ಮ ಚಿತ್ರಗಳ ಬಜೆಟ್ ಮತ್ತು ಗುಣಮಟ್ಟದ ಬಗ್ಗೆ ಧೈರ್ಯವಾಗಿ ಹೇಳಿಕೊಳ್ಳಬೇಕು” ಎನ್ನುವ ಮೂಲಕ ಭಾರತೀಯ ಸಿನಿಮಾದ ತಾಕತ್ತನ್ನು ಎತ್ತಿ ಹಿಡಿದಿದ್ದಾರೆ.

Must Read

Skip to toolbar