November 14, 2026
Saturday, November 14, 2026
spot_img

ರಾಷ್ಟ್ರಪತಿ ಭವನದಲ್ಲಿ ಮಕ್ಕಳ ದಿನಾಚರಣೆಯ ಸಂಭ್ರಮ: ಪುಟಾಣಿಗಳೊಂದಿಗೆ ಸಂವಾದ ನಡೆಸಿದ ಮುರ್ಮು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಕ್ಕಳ ದಿನಾಚರಣೆಯ ಪ್ರಯುಕ್ತ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ವಿವಿಧ ಶಾಲೆಗಳು ಮತ್ತು ಸಂಸ್ಥೆಗಳ ಮಕ್ಕಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬದ್ಧತೆ, ಸಮರ್ಪಣಾ ಭಾವ ಮತ್ತು ನಿರಂತರ ಪರಿಶ್ರಮದ ಮೂಲಕ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.

ರಾಷ್ಟ್ರಪತಿ ಭವನದ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದ್ದು, ರಾಷ್ಟ್ರಪತಿಗಳು ಮಕ್ಕಳೊಂದಿಗೆ ಬೆರೆತು ಅವರ ಕನಸುಗಳಿಗೆ ನೀರೆರೆಯುವ ಮಾತುಗಳನ್ನಾಡಿದ್ದಾರೆ ಎಂದು ತಿಳಿಸಲಾಗಿದೆ.

‘ಮಕ್ಕಳೇ ವಿಕಸಿತ ಭಾರತದ ಶಿಲ್ಪಿಗಳು’

ಮತ್ತೊಂದೆಡೆ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಅವರು ಕೂಡ ಮಕ್ಕಳ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, “ಮಕ್ಕಳ ದಿನಾಚರಣೆಯಂದು ಎಲ್ಲಾ ಎಳೆಯ ಮನಸ್ಸುಗಳಿಗೆ ಹಾರ್ದಿಕ ಶುಭಾಶಯಗಳು. ನಮ್ಮ ಮಕ್ಕಳೇ ‘ವಿಕಸಿತ ಭಾರತ’ದ ನಿಜವಾದ ಶಿಲ್ಪಿಗಳು. ಅವರ ಕುತೂಹಲವನ್ನು ಪೋಷಿಸುವ, ಗುಣಮಟ್ಟದ ಶಿಕ್ಷಣ ನೀಡುವ ಮತ್ತು ದೊಡ್ಡ ಕನಸುಗಳನ್ನು ಕಂಡು ದೇಶವನ್ನು ಮುನ್ನಡೆಸಲು ಎಲ್ಲಾ ಅವಕಾಶಗಳನ್ನು ಒದಗಿಸುವ ನಮ್ಮ ಬದ್ಧತೆಯನ್ನು ಇಂದು ನಾವು ಪುನರುಚ್ಚರಿಸುತ್ತೇವೆ” ಎಂದು ಬರೆದುಕೊಂಡಿದ್ದಾರೆ.

ಮಕ್ಕಳ ದಿನಾಚರಣೆಯ ಹಿನ್ನೆಲೆ

ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನವಾದ ನವೆಂಬರ್ 14ರಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1889ರ ನವೆಂಬರ್ 14ರಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನಿಸಿದ್ದ ನೆಹರು ಅವರು 1964ರ ಮೇ 27ರಂದು ನಿಧನರಾದರು. 1956ಕ್ಕೂ ಮೊದಲು ಭಾರತದಲ್ಲಿ ವಿಶ್ವಸಂಸ್ಥೆಯ ಘೋಷಣೆಯಂತೆ ನವೆಂಬರ್ 20ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತಿತ್ತು. ಆದರೆ, 1964ರಲ್ಲಿ ನೆಹರು ಅವರ ನಿಧನದ ನಂತರ, ಅವರ ಜನ್ಮದಿನವನ್ನೇ ರಾಷ್ಟ್ರೀಯ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ಸಂಸತ್ತಿನಲ್ಲಿ ಅವಿರೋಧ ನಿರ್ಣಯ ಕೈಗೊಳ್ಳಲಾಯಿತು.

ಇದನ್ನೂ ಓದಿ:

ಈ ದಿನದಂದು ದೇಶದ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ಸರ್ಕಾರಿ ಸಂಸ್ಥೆಗಳು ನೆಹರು ಅವರಿಗೆ ಗೌರವ ನಮನ ಸಲ್ಲಿಸುತ್ತವೆ.

Must Read

Skip to toolbar