November 14, 2026
Saturday, November 14, 2026
spot_img

ಮಹಾನಟನಿಗೆ ಅವಮಾನವೇ? ಧನುಷ್ ಸಿನಿಮಾದ ಪೋಸ್ಟರ್ ಕಂಡು ಕೆರಳಿದ ಮಲಯಾಳಂ ಫ್ಯಾನ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ಧನುಷ್ ಮತ್ತು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟ್ಟಿ ಅಭಿನಯದ ‘ಓ.ಎಂ’ (O.M) ಚಿತ್ರದ ಹೊಸ ಪ್ರಚಾರದ ಅಪ್‌ಡೇಟ್ ಈಗ ಸಿನಿಪ್ರಿಯರ ನಡುವೆ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ಸಿನಿಮಾದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆಯಾದರೂ, ಅದರಲ್ಲಿ ದಿಗ್ಗಜ ನಟ ಮಮ್ಮುಟ್ಟಿ ಅವರ ಹೆಸರು ಕಾಣಿಸದೇ ಇರುವುದು ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ.

ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ ಮಮ್ಮುಟ್ಟಿ ಅಭಿಮಾನಿಗಳು ‘ಎಕ್ಸ್’ ಖಾತೆಯಲ್ಲಿ ಚಿತ್ರತಂಡದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಪ್ರಚಾರದ ವಿಚಾರದಲ್ಲಿ ಹಿರಿಯ ನಟನನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಹಲವರು ಟೀಕಿಸಿದ್ದಾರೆ. “ಮಮ್ಮುಟ್ಟಿ ಅಭಿಮಾನಿಯಾಗಿ ನನಗೆ ಎರಡು ವಿಷಯಗಳಲ್ಲಿ ಬೇಸರವಾಗಿದೆ. ಒಂದು ಯೂಟ್ಯೂಬ್‌ನಲ್ಲಿ ವೀಡಿಯೋಗಳನ್ನು ಹಾಕಿರುವ ಕ್ರಮ, ಮತ್ತೊಂದು ಇಂದಿನ ಪೋಸ್ಟರ್‌ನಲ್ಲಿ ಅವರನ್ನು ತೋರಿಸಿರುವ ರೀತಿ” ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ಮತ್ತೊಬ್ಬ ಅಭಿಮಾನಿ ನಿರ್ಮಾಣ ಸಂಸ್ಥೆಯನ್ನು ನೇರವಾಗಿ ಪ್ರಶ್ನಿಸಿದ್ದು, “ನಿಮ್ಮ ಸಿನಿಮಾದಲ್ಲಿ ಮಮ್ಮುಟ್ಟಿ ಅವರಂತಹ ದೊಡ್ಡ ನಟರಿದ್ದಾರೆ. ಹೀಗಿರುವಾಗ ಪೋಸ್ಟರ್‌ನಲ್ಲಿ ಅವರ ಹೆಸರು ಏಕಿಲ್ಲ? ಅವರಿಗೆ ಸಲ್ಲಬೇಕಾದ ಗೌರವವನ್ನು ನೀಡದೆ. ಪೋಸ್ಟರ್‌ನಲ್ಲಿ ಹೆಸರನ್ನು ಕೈಬಿಡುವ ಮೂಲಕ ಒಬ್ಬ ಮಹಾನಟನಿಗೆ ಅವಮಾನ ಮಾಡಿದಂತೆ ಭಾಸವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರಧಾರಿಗಳೆಲ್ಲರಿಗೂ ಸಮಾನ ಗೌರವ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಇಷ್ಟೆಲ್ಲಾ ಟೀಕೆಗಳ ನಡುವೆಯೂ, ಎಲ್ಲರೂ ಇದನ್ನು ವಿವಾದವಾಗಿ ನೋಡುತ್ತಿಲ್ಲ. ಮತ್ತೊಂದು ವರ್ಗದ ಅಭಿಮಾನಿಗಳು ಚಿತ್ರತಂಡದ ನಿರ್ಧಾರವನ್ನು ಈಗಲೇ ತಪ್ಪಾಗಿ ಭಾವಿಸದೆ ಸಿನಿಮಾ ಬಿಡುಗಡೆಯಾಗುವವರೆಗೆ ಕಾಯುವಂತೆ ಸಲಹೆ ನೀಡಿದ್ದಾರೆ. ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ ಧನುಷ್ ಹೆಸರಿಗಿಂತಲೂ ಮುಂಚಿತವಾಗಿ ಮಮ್ಮುಟ್ಟಿ ಅವರಿಗೆ ವಿಶೇಷ ಗೌರವ ನೀಡುವ ಯೋಜನೆ ಚಿತ್ರತಂಡಕ್ಕಿರಬಹುದು ಎಂದು ನೆಟ್ಟಿಗರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ‘ಓ.ಎಂ’ ಪೋಸ್ಟರ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗೆ ವೇದಿಕೆಯಾಗಿದೆ.

Must Read

Skip to toolbar