November 14, 2026
Saturday, November 14, 2026
spot_img

ಬ್ಲಾಕ್‌ಮೇಲ್ ಮಾಡಿ ₹14 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ: ಆರೋಪಿ ಬಂಧನ

ಹೊಸದಿಗಂತ ವರದಿ ಬೆಳಗಾವಿ:

ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಖಾಸಗಿ ಫೋಟೋಗಳನ್ನು ಸಾಮಾಜಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪಿಯನ್ನು ಗೋಕಾಕ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಖನಗಾಂವ ಗ್ರಾಮದ ಸಚೀನ್ ಶಿವಾಜಿ ಪೂಜೇರಿ ಬಂಧಿತ ಆರೋಪಿ. ದೇವಗೌಡನಹಟ್ಟಿ ಗ್ರಾಮದ ಲಕ್ಷ್ಮೀ ಗಂಗಪ್ಪ ಬಾರಿಮರದ ಎಂಬುವರು ನ.8ರಂದು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಯು ತನ್ನ ಹಾಗೂ ಮಹಿಳೆಯ ನಡುವಿನ ಖಾಸಗಿ ಫೋಟೋಗಳು ತನ್ನ ಬಳಿಯಿದ್ದು, ಅವುಗಳನ್ನು ಪತಿಗೆ ಕಳುಹಿಸಿ ಸಂಸಾರ ಹಾಳು ಮಾಡುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ಮಹಿಳೆಯ ಪತಿಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ, ಸೆ.27ರಂದು ಬೆಳಿಗ್ಗೆ 11 ಗಂಟೆಗೆ ದೇವಗೌಡನಹಟ್ಟಿಯಲ್ಲಿ ₹14 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬಲವಂತವಾಗಿ ಪಡೆದುಕೊಂಡಿದ್ದಾನೆ. ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಮಹಿಳೆ ಹಾಗೂ ಆಕೆಯ ಪತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 225/2026ರ ಅಡಿಯಲ್ಲಿ ಬಿಎನ್ಎಸ್ 2023ರ ಕಲಂ 308(2), 308(5) ಹಾಗೂ 351ರ ಪ್ರಕಾರ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ನ.10ರಂದು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ. ಆತನಿಂದ ಒಟ್ಟು ₹13.20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ₹5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:

ವಶಪಡಿಸಿಕೊಂಡ ವಸ್ತುಗಳಲ್ಲಿ 34.74 ಗ್ರಾಂ ತೂಕದ ಬಂಗಾರದ ತಾಳಿ, ನೆಕ್ಲೇಸ್, ಚೈನ್, ಎರಡು ಜೋಡಿ ಜುಮಕಿ, ಕಿವಿಯೋಲೆ, ಎರಡು ಎಳೆಯ ಬಂಗಾರದ ಸರ ಸೇರಿದಂತೆ ವಿವಿಧ ಆಭರಣಗಳಿವೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಗೋಕಾಕ ಉಪಕಾರಾಗೃಹದಲ್ಲಿರಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ. ಬಸರಗಿ, ಡಿವೈಎಸ್ಪಿ ರವಿ ಡಿ. ನಾಯ್ಕ ಹಾಗೂ ಸಿಪಿಐ ವಿಜಯಕುಮಾರ ಸಿನ್ನೂರ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಕೆ.ಬಿ. ವಾಲಿಕಾರ ಹಾಗೂ ಗೋಕಾಕ ಗ್ರಾಮೀಣ ಠಾಣೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಆರೋಪಿಯನ್ನು ಬಂಧಿಸಿ ಸುಲಿಗೆ ಮಾಡಿದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

Must Read

Skip to toolbar