November 14, 2026
Saturday, November 14, 2026
spot_img

ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಸರ್ಕಾರ ಬದ್ಧ; ಸಕ್ಕರೆ ಎಂಎಸ್‌ಪಿ ಹೆಚ್ಚಿಸುವಂತೆ ಕೇಂದ್ರಕ್ಕೆ ಸತೀಶ್ ಜಾರಕಿಹೊಳಿ ಆಗ್ರಹ

ಹೊಸದಿಗಂತ ವರದಿ ಬೆಳಗಾವಿ:

ಕಬ್ಬು ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯಬೇಕು ಎಂಬುದೇ ಸರ್ಕಾರದ ಆಶಯವಾಗಿದ್ದು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್ಪಿ) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಆಗ್ರಹಿಸಿದರು.

ಈ ಬಗ್ಗೆ ನಗರದ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರಿಗೆ ಹೆಚ್ಚಿನ ದರ ನೀಡುವ ಸಾಮರ್ಥ್ಯ ಹೊಂದಿರುವ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ನೀಡುವುದಕ್ಕೆ ಸರ್ಕಾರದ ಯಾವುದೇ ಆಕ್ಷೇಪವಿಲ್ಲ. ಆದರೆ, ಎಲ್ಲ ಕಾರ್ಖಾನೆಗಳ ಆರ್ಥಿಕ ಪರಿಸ್ಥಿತಿ ಒಂದೇ ರೀತಿ ಇರುವುದಿಲ್ಲ. ಸಕ್ಕರೆ ಉತ್ಪಾದನೆ, ಕಬ್ಬಿನ ಇಳುವರಿ, ಸಕ್ಕರೆ ಮಾರಾಟದ ದರ ಹಾಗೂ ಕಾರ್ಖಾನೆಗಳ ಆರ್ಥಿಕ ಸಾಮರ್ಥ್ಯವನ್ನು ಆಧರಿಸಿ ದರದಲ್ಲಿ ವ್ಯತ್ಯಾಸವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳ ಬಳಿಕ ಪ್ರತಿ ಟನ್ ಕಬ್ಬಿಗೆ ₹3,600 ಮೂಲ ದರ ನಿಗದಿಪಡಿಸುವ ಸೂತ್ರ ರೂಪಿಸಲಾಗಿತ್ತು. ಇದೀಗ ಕಾರ್ಖಾನೆಗಳು ಘೋಷಿಸಿರುವ ದರಗಳಿಗೂ ಈ ಸೂತ್ರಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಸಕ್ಕರೆಯ ಮಾರಾಟದ ಬೆಲೆ ಹೆಚ್ಚಾದಂತೆ ರೈತರಿಗೂ ಹೆಚ್ಚುವರಿ ಹಣ ದೊರೆಯುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಹೀಗಾಗಿ ಆರಂಭಿಕ ದರದ ಜತೆಗೆ ರೈತರಿಗೆ ಅಂತಿಮವಾಗಿ ದೊರೆಯುವ ಒಟ್ಟು ಮೊತ್ತವನ್ನೂ ಪರಿಗಣಿಸಬೇಕು ಎಂದು ತಿಳಿಸಿದರು.

ಈ ಬಾರಿ ಕಬ್ಬಿನ ಇಳುವರಿ ಕಡಿಮೆಯಾಗಿರುವುದರಿಂದ ಕಬ್ಬು ಖರೀದಿಸಲು ಕಾರ್ಖಾನೆಗಳ ನಡುವೆ ಪೈಪೋಟಿ ಉಂಟಾಗಿದೆ. ರೈತರಿಂದ ಕಬ್ಬು ಪಡೆಯಲು ಕೆಲವು ಕಾರ್ಖಾನೆಗಳು ಹೆಚ್ಚಿನ ದರ ಘೋಷಿಸುತ್ತಿವೆ. ಮಹಾರಾಷ್ಟ್ರದಲ್ಲಿ ಮೊದಲಿನಿಂದಲೂ ಕರ್ನಾಟಕಕ್ಕಿಂತ ಹೆಚ್ಚಿನ ದರ ನೀಡುವ ಪದ್ಧತಿಯಿದೆ. ಬೆಳಗಾವಿ ಮಾತ್ರವಲ್ಲದೆ ಕಲಬುರಗಿ, ಹಾವೇರಿ ಜಿಲ್ಲೆಗಳಲ್ಲಿಯೂ ಕಾರ್ಖಾನೆಗಳು ವಿಭಿನ್ನ ದರ ನೀಡುತ್ತಿವೆ ಎಂದರು.

ಸಕ್ಕರೆಯ ಎಂಎಸ್ಪಿ ಹೆಚ್ಚಳಕ್ಕೆ ನ. 26ರ ಗಡುವು ವಿಧಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರೈತರ ಬೇಡಿಕೆ ಪರಿಶೀಲಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಸಮಿತಿ ವರದಿ ಹಾಗೂ ರೈತರ ಬೇಡಿಕೆಗಳನ್ನು ಪರಿಶೀಲಿಸಿ ಕೇಂದ್ರವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ರಸ್ತೆ ಗುಂಡಿಗಳ ನಿರ್ವಹಣೆ ಪಾಲಿಕೆಯ ಜವಾಬ್ದಾರಿ: ಬೆಳಗಾವಿ ನಗರದ ರಸ್ತೆ ಗುಂಡಿಗಳ ಕುರಿತು ಬಿಜೆಪಿ ಶಾಸಕ ಅಭಯ ಪಾಟೀಲ ನೀಡಿರುವ ಪ್ರತಿಭಟನೆಯ ಎಚ್ಚರಿಕೆಗೆ ಪ್ರತಿಕ್ರಿಯಿಸಿದ ಸಚಿವರು, ರಸ್ತೆ ನಿರ್ವಹಣೆ ಮತ್ತು ಗುಂಡಿ ಮುಚ್ಚುವ ಜವಾಬ್ದಾರಿ ಮಹಾನಗರ ಪಾಲಿಕೆಯದ್ದಾಗಿದೆ. ಪಾಲಿಕೆಯಲ್ಲಿ ಯಾರ ಆಡಳಿತವಿದೆ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕು ಎಂದರು.

ಇದನ್ನೂ ಓದಿ:

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಶೇ.70ರಷ್ಟು ಅನುದಾನ ನೀಡಲಾಗಿತ್ತು. ಉತ್ತರ ಕ್ಷೇತ್ರಕ್ಕೆ ಅಗತ್ಯ ಅನುದಾನ ನೀಡಿರಲಿಲ್ಲ. ಆಗಿನ ಅನುದಾನ ಹಂಚಿಕೆಯ ಬಗ್ಗೆಯೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಬರಬೇಕಿರುವ ಸುಮಾರು ₹10 ಸಾವಿರ ಕೋಟಿ ಅನುದಾನ ಬಿಡುಗಡೆಗೆ ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತೆರಿಗೆ ಸೋರಿಕೆ ತಡೆದು, ತಂತ್ರಜ್ಞಾನ ಬಳಸಿ ತೆರಿಗೆ ಸಂಗ್ರಹ ಹೆಚ್ಚಿಸಬೇಕು ಎಂದರು.

ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಮಾತನಾಡಿದ ಅವರು, ಗೋಕಾಕ ಮತ್ತು ಚಿಕ್ಕೋಡಿ ಸೇರಿದಂತೆ ವಿವಿಧ ಭಾಗಗಳಿಂದ ಪ್ರತ್ಯೇಕ ಜಿಲ್ಲೆಯ ಬೇಡಿಕೆಗಳಿವೆ. ಬೈಲಹೊಂಗಲ, ಅಥಣಿ, ರಾಮದುರ್ಗ ಭಾಗಗಳಿಂದಲೂ ಬೇಡಿಕೆಗಳು ಕೇಳಿಬರುತ್ತಿವೆ. ಜಿಲ್ಲೆ ವಿಭಜನೆಯಾಗಬೇಕು ಎಂಬುದು ತಮ್ಮ ಅಭಿಪ್ರಾಯವಾದರೂ, ಈ ಕುರಿತು ಎಲ್ಲ ಪ್ರದೇಶಗಳ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ನಡುವೆ ಒಮ್ಮತ ಮೂಡಬೇಕು ಎಂದು ಸ್ಪಷ್ಟಪಡಿಸಿದರು.

Must Read

Skip to toolbar